ADVERTISEMENT

ಕೆಆರ್‌ಎಸ್‌ ಜಲಾಶಯದ ಕ್ರಸ್ಟ್‌ಗೇಟ್‌ ಬದಲಿಸಲು ಕೋವಿಡ್‌ ಅಡ್ಡಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 6:43 IST
Last Updated 24 ಜೂನ್ 2021, 6:43 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಕ್ರಸ್ಟ್‌ಗೇಟ್‌
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಕ್ರಸ್ಟ್‌ಗೇಟ್‌   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯಕ್ಕೆ ಮೂರು ದಶಕಗಳ ಹಿಂದೆ ಅಳವಡಿಸಿರುವ ಕ್ರಸ್ಟ್‌ ಗೇಟ್‌ಗಳನ್ನು ಬದಲಿಸುವ ಪ್ರಕ್ರಿಯೆಗೆ ಕೋವಿಡ್‌ ಅಡ್ಡಿಯಾಗಿದೆ.

ಜಲಾಶಯದ 134 ಗೇಟ್‌ಗಳನ್ನು ವಿಶ್ವಬ್ಯಾಂಕ್‌ ನೆರವಿನಿಂದ ‘ಜಲಾಶಯ ಪುನರ್‌ಬಲನ ಯೋಜನೆ’ಯಡಿ (ಡಿಆರ್‌ಐಪಿ) ಯೋಜನೆಯಡಿ, ₹ 59 ಕೋಟಿ ವೆಚ್ಚದಲ್ಲಿ ಬದಲಿಸುವ ಪ್ರಕ್ರಿಯೆಯ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಫ್ಯಾಬ್ರಿಕೇಟ್‌ ಪ್ರಕ್ರಿಯೆ ಕೂಡ ಶುರುವಾಗಿತ್ತು. ಇದಕ್ಕೆ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ದ ಒಪ್ಪಿಗೆಯೂ ಸಿಕ್ಕಿತ್ತು. ಕ್ರಸ್ಟ್‌ ಗೇಟ್‌ಗಳನ್ನು ಬದಲಿಸುವ ಗುತ್ತಿಗೆಯನ್ನು ಪಡೆದಿರುವ ಗುಜರಾತ್‌ ಮೂಲದ ಹಾರ್ಡ್‌ವೇರ್‌ ಟೂಲ್ಸ್‌ ಹೆಸರಿನ ಕಂಪನಿ ಎರಡು ವರ್ಷಗಳಲ್ಲಿ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿತ್ತು.

‘2020ರ ಮಾರ್ಚ್‌ನಿಂದ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡ ಬಳಿಕ ಉದ್ದೇಶಿತ ಕೆಲಸ ಸ್ಥಗಿತಗೊಂಡಿದೆ. ಗೇಟ್‌ಗಳ ವೆಲ್ಡಿಂಗ್‌ಗೆ ಬೇಕಾದ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದೆ. ಪಶ್ಚಿಮ ಬಂಗಾಳ ಮತ್ತು ಜೈಪುರದಿಂದ ಬರಬೇಕಿದ್ದ ಪೂರಕ ಸಾಮಗ್ರಿಗಳ ಸರಬರಾಜು ನಿಂತಿದೆ. ಜತೆಗೆ ತಂತ್ರಜ್ಞರೂ ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲ ಸಿಗದ ಕಾರಣ ಗೇಟ್‌ಗಳ ಬದಲಿಸು ಕೆಲಸ ಶುರು ಮಾಡಲು ಆಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಕಾವೇರಿ ನೀರಾವರಿ ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಸದ್ಯ ಸಿಂಗಲ್‌ ಕ್ರೇನ್‌ನಿಂದ 40 ಗೇಟ್‌ಗಳನ್ನು ಚಾಲನೆ ಮಾಡಲಾಗುತ್ತಿದೆ. ಜಲಾಶಯ ನಿರ್ಮಾಣ ಆದಾಗ ಅಳವಡಿಸಿರುವ 48 ಸ್ವಯಂ ಚಾಲಿತ ಗೇಟ್‌ಗಳು ಕೆಲಸ ಮಾಡುತ್ತಿಲ್ಲ. 2 ಲಕ್ಷ ಕ್ಯುಸೆಕ್ ಅಥವಾ ಅದಕ್ಕಿಂತ ಹೆಚ್ಚಿನ ನೀರು ಜಲಾಶಯಕ್ಕೆ ಹರಿದು ಬಂದರೆ ಗೇಟ್‌ಗಳನ್ನು ತೆರೆಯುವುದು ತ್ರಾಸದ ಕೆಲಸ. ಗೇಟ್‌ಗಳನ್ನು ಬದಲಿಸುವ ಪ್ರಕ್ರಿಯೆ ಆಗಲೇಬೇಕು. ಆದರೆ, ಈಗಾಗಲೇ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ಮುಂದಿನ ಬೇಸಿಗೆವರೆಗೆ ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವ ಕೆಲಸ ಆರಂಭಿಸುವುದು ಅಸಾಧ್ಯ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.