ADVERTISEMENT

ಮಂಡ್ಯ| ಮಂಡ್ಯದಲ್ಲಿ ಇಬ್ಬರ ಸಾವು, 7 ಮಂದಿಗೆ ಸೋಂಕು

ತೀವ್ರ ಉಸಿರಾಟದ ಸಮಸ್ಯೆ, ಮಧುಮೇಹದಿಂದ ಬಳಲುತ್ತಿದ್ದವರ ನಿಧನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 17:00 IST
Last Updated 19 ಜುಲೈ 2020, 17:00 IST

ಮಂಡ್ಯ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌–19ಗೆ ಇಬ್ಬರು ಸಾವನ್ನಪ್ಪಿದ್ದು ಜಿಲ್ಲೆಯ ಒಟ್ಟು ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಭಾನುವಾರ ಹೊಸದಾಗಿ 7 ಮಂದಿಗೆ ಸೋಂಕು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 869ಕ್ಕೆ ಏರಿಕೆಯಾಗಿದೆ.

49,070ನೇ ರೋಗಿ 75 ವರ್ಷದ ಮಹಿಳೆಯಾಗಿದ್ದು ಜುಲೈ 13ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 16ರಂದು ಅವರಿಗೆ ಕೋವಿಡ್‌–19 ದೃಢಪಟ್ಟಿತ್ತು. ಜ್ವರ, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಜುಲೈ 18ರಂದು ರಾತ್ರಿ ನಿಧನರಾದರು.

59,840ನೇ ರೋಗಿ 60 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು ಜುಲೈ 14ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಜುಲೈ 18ರಂದು ರಾತ್ರಿ ಮೃತಪಟ್ಟರು.

ADVERTISEMENT

ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಈಗ ಜಿಲ್ಲಾಸ್ಪತ್ರೆಯಲ್ಲಿ ಸಾವಿನ ಪ್ರಕರಣ ಕಂಡುಬರುತ್ತಿದ್ದು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ. ವೆಂಟಿಲೇಟರ್‌ನಲ್ಲಿ ಇಬ್ಬರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.

ಭಾನುವಾರ 7 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಟ್ಟು 869 ರೋಗಿಗಳಲ್ಲಿ 609 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದ 253 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದ 30 ಮಂದಿ ರೋಗಿಗಳು ಭಾನುವಾರ ಮನೆಗೆ ತೆರಳಿದ್ದಾರೆ.

‘ಈಚೆಗೆ ಕೋವಿಡ್‌ ರೋಗಿಗಳು ನಿಧನರಾಗುತ್ತಿರುವುದಕ್ಕೆ ಕಾರಣ ಪತ್ತೆಹಚ್ಚಬೇಕಾಗಿದೆ. ಅದಕ್ಕಾಗಿ ಸೋಮವಾರ ಸಂಜೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಯಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.