ADVERTISEMENT

ಮಂಡ್ಯದಲ್ಲಿ ಹೊರ ಜಿಲ್ಲೆಯ ರೋಗಿಗಳ ದಾಖಲು: ಸೋಂಕಿತರ ಸಂಖ್ಯೆ ಹೆಚ್ಚಳ

‘ಕೇರ್‌ ಆಫ್‌’ ವಿಳಾಸ ನೀಡಿ ಕೋವಿಡ್‌ ಪರೀಕ್ಷೆ

ಎಂ.ಎನ್.ಯೋಗೇಶ್‌
Published 29 ಏಪ್ರಿಲ್ 2021, 19:30 IST
Last Updated 29 ಏಪ್ರಿಲ್ 2021, 19:30 IST
ಕೋವಿಡ್‌ ಪರೀಕ್ಷೆಗೆ ಜಿಲ್ಲಾಸ್ಪತ್ರೆ ಎದುರು ಜನಜಂಗುಳಿ ಉಂಟಾಗಿರುವುದು
ಕೋವಿಡ್‌ ಪರೀಕ್ಷೆಗೆ ಜಿಲ್ಲಾಸ್ಪತ್ರೆ ಎದುರು ಜನಜಂಗುಳಿ ಉಂಟಾಗಿರುವುದು   

ಮಂಡ್ಯ: ಬೆಂಗಳೂರು, ರಾಮನಗರ ಜಿಲ್ಲೆಯ ಜನರು ಮಂಡ್ಯ ವಿಳಾಸ ನೀಡಿ ಮಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಸೋಂಕು ದೃಢಪಟ್ಟವರು ಇಲ್ಲೇ ಆಸ್ಪತ್ರೆಗೆ ದಾಖಲಾಗುತ್ತಿದ್ದು ಜಿಲ್ಲೆಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುವಂತೆ ಮಾಡಿದೆ.

ಪ್ರತಿದಿನ ಮಿಮ್ಸ್‌ ಆಸ್ಪತ್ರೆ ಆವರಣವೊಂದರಲ್ಲೇ ಸಾವಿರಕ್ಕೂ ಹೆಚ್ಚು ಜನರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ಧಾರೆ. ಅದರಲ್ಲಿ ಬಹುತೇಕ ಜನರು ಬೆಂಗಳೂರು, ರಾಮನಗರ, ಚನ್ನಪಟ್ಟಣ ಮುಂತಾದ ಸ್ಥಳಗಳಿಂದ ಜಿಲ್ಲೆಯತ್ತ ಬರುತ್ತಿದ್ದಾರೆ. ಮಂಡ್ಯದ‘ಕೇರ್‌ ಆಫ್‌’ವಿಳಾಸ ನೀಡಿ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ಬೆಂಗಳೂರಿನಲ್ಲಿ ಹಾಸಿಗೆ, ಆಮ್ಲಜನಕ, ವೆಂಟಿಲೇಟರ್‌ ಸಿಗದೆ ಪರಿಸ್ಥಿತಿ ಉಲ್ಭಣಗೊಂಡಿರುವ ಕಾರಣ ಭಯದಿಂದ ಮಂಡ್ಯದತ್ತ ಬರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಂಗಳೂರು ಮತ್ತು ಮಂಡ್ಯದ ನಡುವೆ ದಿನನಿತ್ಯ ಸಾವಿರಾರು ಜನರು ಓಡಾಡುತ್ತಾರೆ, ಹೀಗಾಗಿ ಎರಡೂ ನಗರಗಳ ನಡುವೆ ಅವಿನಾಭಾವ ಸ್ನೇಹ ಸಂಬಂಧವಿದೆ. ಹಾಸಿಗೆ, ಆಮ್ಲಜನಕ ಸಿಗುತ್ತಿದೆ ಎಂಬುದನ್ನು ಅರಿತ ಹೊರಗಿನವರು ನಗರದತ್ತ ಬರುತ್ತಿದ್ಧಾರೆ. ಸ್ನೇಹಿತರು, ಸಂಬಂಧಿಕರ ವಿಳಾಸ ನೀಡಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ವರದಿ ಫಲಿತಾಂಶ ಪಾಸಿಟವ್‌ ಬಂದರೆ ಇಲ್ಲಿಯ ಕೋವಿಡ್‌ ಕೇರ್‌ ಕೇಂದ್ರಗಳಲ್ಲೇ ದಾಖಲಾಗುತ್ತಿದ್ದಾರೆ.

‘ನನ್ನ ಇಬ್ಬರು ಗೆಳೆಯರು ಒಕ್ಕಲಿಗರ ವಿದ್ಯಾರ್ಥಿನಿಯಲಯದ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಇಬ್ಬರೂ ಆರೋಗ್ಯವಾಗಿದ್ದು ಯಾವುದೇ ತೊಂದರೆಯಾಗಿಲ್ಲ. ನಮ್ಮ ಮನೆಯ ವಿಳಾಸ ನೀಡುವುದಾಗಿ ತಿಳಿಸಿದಾಗ ನನಗೆ ಇಲ್ಲ ಎನ್ನಲು ಸಾಧ್ಯವಾಗಲಿಲ್ಲ’ ಎಂದು ಸುಭಾಷ್‌ನಗರದ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರು ತಿಳಿಸಿದರು.

ಮಂಡ್ಯ ತಾಲ್ಲೂಕಿನಲ್ಲೇ ಅಧಿಕ ಸಂಖ್ಯೆ: ಪ್ರತಿದಿನ ಬರುತ್ತಿರುವ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಮಂಡ್ಯ ತಾಲ್ಲೂಕೊಂದರಲ್ಲೇ ರೋಗಿಗಳ ಸಂಖ್ಯೆ ನಿತ್ಯ 300 ದಾಟುತ್ತಿದೆ. ಬೇರೆ ತಾಲ್ಲೂಕುಗಳಲ್ಲಿ ಸೋಂಕಿತರ ಸಂಖ್ಯೆ 100ರ ಗಡಿಯಲ್ಲಿದ್ದರೆ ಮಂಡ್ಯ ತಾಲ್ಲೂಕಿನಲ್ಲಿ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದೆ. ಅದರಲ್ಲಿ ಬಹುತೇಕ ಮಂದಿ ಮಂಡ್ಯ ನಗರದ ವಿಳಾಸ ನೀಡಿದ್ದಾರೆ. ಈ ಸಂಖ್ಯೆಯಲ್ಲಿ ಬಹುತೇಕ ಮಂದಿ ಹೊರಜಿಲ್ಲೆಗೆ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಹೊರಜಿಲ್ಲೆಯಿಂದ ಬಂದು ಜನರು ಚಿಕಿತ್ಸೆ ಪಡೆಯುತ್ತಿರುವುದು ನಿಜ. ಮಂಡ್ಯ ವಿಳಾಸ ನೀಡುತ್ತಿರುವ ಕಾರಣ ಪರೀಕ್ಷೆ ಮಾಡುವುದಿಲ್ಲ ಎಂದು ಅವರನ್ನು ವಾಪಸ್‌ ಕಳುಹಿಸಲು ಸಾಧ್ಯವಾಗದು. ಕಳೆದ ವರ್ಷ ಕೋವಿಡ್‌ ನಿರ್ವಹಣೆಯಲ್ಲಿ ನಮ್ಮ ಜಿಲ್ಲೆ ಉತ್ತಮ ಸ್ಥಿತಿಯಲ್ಲಿತ್ತು. ಅವರು ಇಲ್ಲಿಗೆ ಬರಲು ಇದೂ ಒಂದು ಕಾರಣ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ಬೆಂಗಳೂರಿನಿಂದ ಬಂದು ಚಿಕಿತ್ಸೆ ಪಡೆಯುತ್ತಿರುವವರೆಲ್ಲರೂ ಯುವಜನರೇ ಇದ್ದಾರೆ. ಎ ರೋಗಲಕ್ಷಣ ಇರುವವರನ್ನು ಒಕ್ಕಲಿಗರ ವಿದ್ಯಾರ್ಥಿ ನಿಲಯ, ಕೆರೆಯಂಗಳದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಕೋವಿಡ್‌ ಕೇರ್‌ ಕೇಂದ್ರದಲ್ಲಿ ದಾಖಲು ಮಾಡಲಾಗಿದೆ. ಉಸಿರಾಟದ ಸಮಸ್ಯೆ ಇರುವವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ ಎಂದು ಡಿಎಚ್‌ಒ ತಿಳಿಸಿದರು.

ಮಿಮ್ಸ್‌ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ
ಮಿಮ್ಸ್‌ ಆಸ್ಪತ್ರೆಯಲ್ಲಿ ಬುಧವಾರವೇ ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿದ್ದು ರೋಗಿಗಳನ್ನು ದಾಖಲು ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆ ಒಟ್ಟು 400 ಹಾಸಿಗೆ ಸಾಮರ್ಥ್ಯ ಹೊಂದಿದ್ದು 300 ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ನೀಡಲಾಗಿದೆ. ಹೀಗಾಗಿ ವೈದ್ಯರು ಮಿಮ್ಸ್‌ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

‘ಹೆಚ್ಚುವರಿಯಾಗಿ 150 ಹಾಸಿಗೆ ಸಾಮರ್ಥ್ಯದ ವಾರ್ಡ್‌ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿಯವರೆಗೆ ಹಾಸಿಗೆ ದೊರೆಯುವುದಿಲ್ಲ. ಸದ್ಯ ಚಿಕಿತ್ಸೆ ಪಡೆಯುತ್ತಿರುವವರು ಗುಣಮುಖರಾಗಿ ಹೋದರೆ ಮಾತ್ರ ಬೇರೆಯವರಿಗೆ ಅವಕಾಶ ಮಾಡಲು ಸಾಧ್ಯ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

**
ಶ್ರೀರಂಗಪಟ್ಟಣ, ಪಾಂಡವಪುರ ಭಾಗದ ರೋಗಿಗಳು ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರೇ ರೋಗಿಗಳು ಬಂದರೂ ಇಲ್ಲ ಎನ್ನಲು ಸಾಧ್ಯವಿಲ್ಲ
-ಎಸ್‌.ಅಶ್ವಥಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.