ಪಿ.ಎಂ.ನರೇಂದ್ರಸ್ವಾಮಿ
ಮಳವಳ್ಳಿ: ‘ಶಾಸಕರಾಗಿದ್ದಾಗ ತಾಲ್ಲೂಕಿಗೆ ಒಂದೇ ಒಂದು ನೀರಾವರಿ ಯೋಜನೆ ತರಲು ಯೋಗ್ಯತೆ ಇಲ್ಲದವರು ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದರ ಬಗ್ಗೆ ನನಗೆ ಪಾಠ ಮಾಡಲು ಬರುತ್ತಾರೆ’ ಎಂದು ಮಾಜಿ ಶಾಸಕ ಕೆ.ಅನ್ನದಾನಿ ವಿರುದ್ಧ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದರು.
‘ಶಾಸಕನಾಗಿದ್ದ ವೇಳೆ ಯಾವ ಯೋಜನೆಯನ್ನು ಕ್ಷೇತ್ರಕ್ಕೆ ತರಲು ಆಗದವರು ನನ್ನ ಅವಧಿಯ ಪಟ್ಟಣದ ಕುಡಿಯುವ ನೀರಿನ ಯೋಜನೆ, ಕಿರುಗಾವಲು ಬಹುಗ್ರಾಮ ಕುಡಿಯುವ ನೀರು ಯೋಜನೆ, ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆ, ಪೂರಿಗಾಲಿ ಹನಿ ನೀರಾವರಿ ಯೋಜನೆ ಸೇರಿ ಹಲವು ಯೋಜನೆಗಳನ್ನು ಹಳ್ಳಹಿಡಿಸಿದ ಮಹಾನುಭವ ಕೆರೆಗಳಿಗೆ ಬಾಗಿನ ಅರ್ಪಿಸುವುದನ್ನು ಟೀಕಿಸುತ್ತಾರೆ’ ಎಂದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ಮಾತನಾಡಿ ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ‘ ಕೆಲಸ ಮಾಡುವವರಿಗೆ ಅಡ್ಡಗಾಲು ಹಾಕಿ ಓಡುವವರಿಗೆ ತೊಡರುಗಾಲು ಹಾಕುವ ಆಟ ಹೆಚ್ಚು ದಿನ ನಡೆಯುವುದಿಲ್ಲ’ ಎಂದರು.
‘ಮಳೆ ಬಂದ ವೇಳೆ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಆಗುತ್ತಿದ್ದ ಸಮಸ್ಯೆಯನ್ನು ಐದು ವರ್ಷಗಳ ಕಾಲ ಸರಿಪಡಿಸದ ಹಾಗೂ ಕಂದೇಗಾಲ ಕೆರೆಗೆ ಒಂದು ಗೇಟ್ ವಾಲ್ ಹಾಕಿ ನೀರು ಸೋರಿಕೆ ತಡೆಯಲಾಗದ ಶೂರರು. ಇಗ್ಗಲೂರು ಬಲದಂಡೆ ಯೋಜನೆ ಮಾಡಿ ಕೆರೆಗಳನ್ನು ತುಂಬಿಸಿ ನಂತರ ಹಲಗೂರಿಗೆ ಕಾಲಿಡುವುದಾಗಿ ಶಪಥ ಮಾಡಿ ಕೆಲಸ ಮಾಡದೆ ಜನರನ್ನು ವಂಚಿಸಿದವರು ಯಾರು ಎನ್ನುವುದನ್ನು ಮಾಜಿ ಶಾಸಕರು ಸ್ಪಷ್ಟಪಡಿಸಿದರು. ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಪರಾಭಾರೆಯಾಗಲು ಬಿಟ್ಟ ಅಕ್ರಮಗಳ ನಾಯಕ ನನ್ನ ಆಡಳಿತದ ವಿರುದ್ಧ ಟೀಕೆ ಮಾಡಲು ನಾಚಿಕೆಯಾಗಬೇಕು’ ಎಂದರು.
‘ಎರಡು ಬಾರಿ ಶಾಸಕರಾಗಿದ್ದವರ ಆಳ್ವಿಕೆ ಸಂದರ್ಭದಲ್ಲಿ ಅವರ ಸಾಧನೆ ಏನು ಹಾಗೂ ಜಾರಿ ತಂದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದವರು ನನ್ನ ಮೇಲೆ ಮಾತನಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಕಾವೇರಿಕೊಳ್ಳದಲ್ಲಿ ಸಮೃದ್ಧಿಯಾಗಿ ಕೆ.ಆರ್.ಎಸ್ ಅಣೆಕಟ್ಟೆ ತುಂಬಿತ್ತು. ಆದರೆ, ಮಂಡ್ಯ ಜಿಲ್ಲೆಯಲ್ಲಿ ಬರಗಾಲ ಮುಂದುವರಿದ ಪರಿಣಾಮ ಗರಿಷ್ಟ ನೀರನ್ನು ಕಾಲುವೆಗೆ ಹರಿಸಿದರೂ ನೀರಿನ ಸಮಸ್ಯೆ ಎದುರಾಯಿತು. ಇದೀಗ ಸಮಸ್ಯೆಗೆ ವರುಣ ಪರಿಹಾರ ನೀಡಿದ್ದಾನೆ. ಹಿಂದೆ ಮಂಡ್ಯ ಜಿಲ್ಲೆಯ ಜನ ನೀರು ಕೇಳಲು ಹೋದಾಗ ಕೆಆರ್ ಎಸ್ ಕೀ ನನ್ನ ಬಳಿ ಇಲ್ಲ ಕೇಂದ್ರದವರ ಕೈಯಲ್ಲಿದೆ ಎಂದಿದ್ದ ಅವರ ನಾಯಕರ ಮಾತನ್ನು ಮರೆತು ಈಗ ಕೆರೆಗಳ ಬಳಿ ನಿಂತು ನೀರು ಬಿಟ್ಟಿಲ್ಲ ಎಂದು ಕೂಗು ಹಾಕುವುದು ಹಾಸ್ಯಾಸ್ಪದ’ ಎಂದು ಕೆ.ಅನ್ನದಾನಿ ವಿರುದ್ಧ ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.