ADVERTISEMENT

ನಿಷೇಧದ ನಡುವೆಯೂ ಭಕ್ತರ ದಂಡು!

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:24 IST
Last Updated 10 ಜುಲೈ 2021, 4:24 IST
ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ಆಷಾಢ ಮಾಸದ ಅಮಾವಾಸ್ಯೆ ನಿಮಿತ್ತ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ಆಷಾಢ ಮಾಸದ ಅಮಾವಾಸ್ಯೆ ನಿಮಿತ್ತ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು   

ಶ್ರೀರಂಗಪಟ್ಟಣ: ಕೋವಿಡ್‌ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ, ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ತಾಲ್ಲೂಕು ಆಡಳಿತ ನಿಷೇಧಿಸಿದ್ದರೂ ಆಷಾಢದ ಅಮಾವಾಸ್ಯೆಯ ದಿನವಾದ ಶುಕ್ರವಾರ ದೇವಾಲಯಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು.

ಮುಂಜಾನೆ 5 ಗಂಟೆಯಿಂದಲೇ ಜನರು ದೇವಾಲಯಕ್ಕೆ ಬರಲಾರಂಭಿಸಿ ದ್ದರು. ದೇವಾಲಯ ಮುಖ್ಯ ದ್ವಾರವನ್ನು ಬಂದ್‌ ಮಾಡಿದ್ದರಿಂದ ಹಿಂಬದಿಯಿಂದ ದೇವಾಲಯ ಪ್ರಾಂಗಣ ಪ್ರವೇಶಿಸ ಪೂಜೆ ಸಲ್ಲಿಸುವ ಯತ್ನ ನಡೆಯಿತು. ಪೊಲೀಸರ ಕಣ್ಣು ತಪ್ಪಿಸಿ ಕಬ್ಬಿನ ಗದ್ದೆ ಕಡೆಯಿಂದಲೂ ಕೆಲವರು ದೇವಾಲಯದತ್ತ ಬಂದರು. ಪೊಲೀಸರ ಎಚ್ಚರಿಕೆಯ ಬಳಿಕ ದೇವಾಲಯದ 100 ಮೀಟರ್‌ ದೂರದಲ್ಲೇ ಜನರು ಪೂಜೆ ಸಲ್ಲಿಸಿದರು.

ತಡೆ ಒಡೆಯುವುದು, ಕಟ್ಟೆ ಒಡೆಯುವುದು, ಮೊಟ್ಟೆ ಒಡೆಯು ವುದೂ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳು ವಾಡಿಕೆಯಂತೆ ನಡೆದವು. ಹಣ್ಣು, ಕಾಯಿ, ಹೂ, ಮೊಟ್ಟೆ ಮಾರುವ ಸ್ಥಳೀಯ ಮತ್ತು ಹೊರ ಊರಿನ ವ್ಯಾಪಾರಿಗಳು ದೇವಾಲಯ ಹಿಂದೆ ಮತ್ತು ಮುಂದೆ ನಿಂತು ವಹಿವಾಟು ನಡೆಸಿದರು. ದೇವಾಲಯದ ಹಿಂದಿನ ತೋಟದ ಮನೆಗಳಲ್ಲಿ ಕೆಲವರು ಬಾಡೂಟದ ಪರಿಷೆಯನ್ನೂ ನಡೆಸಿದರು. ಬೆಳಿಗ್ಗೆ 10 ಗಂಟೆ ವೇಳೆಗೆ ದೇವಾಲಯದ ಆಸುಪಾಸಿನಲ್ಲಿ ಭಕ್ತರ ದಂಡೇ ಕಂಡುಬಂತು. ಕಡತನಾಳು– ಕ್ಯಾತನಹಳ್ಳಿ ಮಾರ್ಗದಲ್ಲಿ ಜನ ಮತ್ತು ವಾಹನ ದಟ್ಟಣೆ ಉಂಟಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.