ಮಂಡ್ಯ: ಮಳೆ, ಚಳಿ, ಗಾಳಿ ಏನೇ ಬಂದರೂ ತಮ್ಮ ಕಾಯಕವನ್ನು ನಿಲ್ಲಿಸದೆ ಏನಾಗಲಿ ಮುಂದೆ ಸಾಗು ನೀ ಎಂಬಂತೆ ಪ್ರತಿನಿತ್ಯ ಓದುಗರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವಲ್ಲಿ ನಿರತರಾಗಿರುವ ಪತ್ರಿಕಾ ವಿತರಕರ ಕಾಯಕವೇ ಅಸಾಮಾನ್ಯವಾಗಿದೆ.
ಮೊಬೈಲ್, ಟಿ.ವಿ.ಗಳ ಹಾವಳಿ ನಡುವೆಯೂ ನಿತ್ಯ ನಸುಕಿಗೆ ಮನೆ-ಕಚೇರಿಗಳಿಗೆ ದೇಶ-ವಿದೇಶ, ರಾಜ್ಯ-ಸ್ಥಳೀಯ ಸಮಾಚಾರಗಳನ್ನೊಳಗೊಂಡಂತೆ ಇರುವ ಪತ್ರಿಕೆಗಳನ್ನು ವಿತರಿಸುತ್ತಾರೆ ಈ ಕಾಯಕ ಜೀವಿಗಳು. ಸೆಪ್ಟೆಂಬರ್ 4 ಪತ್ರಿಕಾ ವಿತರಕರ ದಿನ. ಇಂಥ ಸುದಿನದಲ್ಲಿ ಸುದ್ದಿ ಸಮಾಚಾರವನ್ನು ಮನೆ-ಮನಗಳಿಗೆ ತಲುಪಿಸುವ ಈ ಸೇನಾನಿಗಳಿಗೆ ಸಲಾಂ ಹೇಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ಹಿಂದಿನಿಂದಲೂ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಯುವ ಸಮುದಾಯ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಾ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಅನೇಕ ಹಿರಿಯರು ನಾಲ್ಕೈದು ದಶಕಗಳಿಂದ ವಿತರಕರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲರಿಗೂ ಪಾರ್ಟ್ ಟೈಂ ಉದ್ಯೋಗದ ಜೊತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತಿದೆ.
ನಿತ್ಯ ನಸುಕಿನ 4 ಗಂಟೆ ವೇಳೆಗೆ ಎದ್ದು ಸೈಕಲ್, ಬ್ಯಾಗ್ ಸಿದ್ಧ ಮಾಡಿಕೊಂಡು ಮನೆಯಿಂದ ಹೊರಡುತ್ತಾರೆ. ನಗರ, ಪಟ್ಟಣ ಅಥವಾ ಗ್ರಾಮೀಣ ಪ್ರದೇಶದ ಬಸ್ ನಿಲ್ದಾಣ, ಪತ್ರಿಕೆಗಳ ವಾಹನಗಳು ಬರುವ ಕಡೆ ಕಾದು ನಿಲ್ಲುತ್ತಾರೆ. ನಂತರ ಪತ್ರಿಕೆಗಳನ್ನು ಮನೆ– ಮನೆಗಳಿಗೆ ತಲುಪಿಸುತ್ತಾರೆ. ಕೋವಿಡ್ ನಂಥ ಕ್ಷಿಷ್ಟ ಸಂದರ್ಭದಲ್ಲೂ ತಮ್ಮ ಜೀವದ ಹಂಗು ತೊರೆದು ಕಾಯಕ ಮಾಡಿ ಜನರ ಮನ ಗೆದ್ದಿದ್ದಾರೆ.
‘ಸಮಾಜದಲ್ಲಿನ ಅನೇಕ ಅಂಕು-ಡೊಂಕುಗಳನ್ನು ತಿದ್ದಿ, ಸುಂದರ, ಸದೃಢ ಸಮಾಜ ನಿರ್ಮಾಣದತ್ತ ಸಾಗುವ ಪತ್ರಿಕೆ ಕಾಯಕದ ಬಗ್ಗೆ ಓದುಗರ ಮೆಚ್ಚುಗೆ ತೃಪ್ತಿ ತಂದಿದೆ. ಇತ್ತೀಚಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿಯ ನಡುವೆಯೂ ಓದುಗರ ಸಂಖ್ಯೆ ಕ್ಷೀಣಿಸದಂತೆ ಕೆಲಸ ಮಾಡುತ್ತೇವೆ’ ಎನ್ನುತ್ತಾರೆ ಮಂಡ್ಯದ ಪತ್ರಿಕಾ ವಿತರಕ ಶ್ರೀಧರ್.
‘ಆರೋಗ್ಯದ ಜತೆಗೆ ಆರ್ಥಿಕ ಪ್ರಬಲತೆಗಾಗಿ ಪತ್ರಿಕಾ ವಿತರಣೆ ಕಾಯಕ ಮುಖ್ಯವಾಗಿದೆ. ಕಳೆದ 40 ವರ್ಷಗಳಿಂದ ಬೆಳಿಗ್ಗೆ ಪ್ರತಿಕೆಗಳನ್ನು ವಿತರಿಸುವ ಕೆಲಸದಲ್ಲಿ ನಿರತನಾಗಿದ್ದೇನೆ. ಈ ಕಾಯಕ ನನಗೆ ತೃಪ್ತಿ ತಂದಿದೆ’ ಎಂದು ಎಂದು ಭಾರತೀನಗರ ಲಕ್ಷ್ಮಣ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.