ADVERTISEMENT

ಮಳವಳ್ಳಿ: ಶಾಸಕ ಮುನಿರತ್ನ ಗಡಿಪಾರಿಗೆ ದಲಿತ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 14:00 IST
Last Updated 20 ಸೆಪ್ಟೆಂಬರ್ 2024, 14:00 IST
ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ಪ್ರತಿಭಟನೆ ನಡೆಸಿ ಶಾಸಕ ಮುನಿರತ್ನ ಅವರನ್ನು ಗಡಿಪಾರು ಮಾಡುವಂತೆ ಪ್ರಭಾರ ತಹಶೀಲ್ದಾರ್ ಬಿ.ವಿ.ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ಪ್ರತಿಭಟನೆ ನಡೆಸಿ ಶಾಸಕ ಮುನಿರತ್ನ ಅವರನ್ನು ಗಡಿಪಾರು ಮಾಡುವಂತೆ ಪ್ರಭಾರ ತಹಶೀಲ್ದಾರ್ ಬಿ.ವಿ.ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ಮಳವಳ್ಳಿ: ಪರಿಶಿಷ್ಟ ಜಾತಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ಶಾಸಕ ಮುನಿರತ್ನ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿ ಮುನಿರತ್ನ ವಿರುದ್ಧ ಘೋಷಣೆ ಕೂಗಿ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಎಂ.ಎನ್.ಜಯರಾಜು ಮಾತನಾಡಿ, ‘ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವ ಮುನಿರತ್ನ ಅವರು ಪರಿಶಿಷ್ಟ ಜಾತಿ ಮತ್ತು ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದೀಗ ಮಹಿಳೆಯರ ಮೇಲೆ ಅತ್ಯಾಚಾರದ ಆರೋಪ ಪ್ರಕರಣ ದಾಖಲಾಗಿದೆ. ಇಂಥ ಘಟನೆಗಳಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಿದೆ. ಹೀಗಾಗಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ‘ಇಂತಹ ನೀಚ ಮನಸ್ಥಿತಿಯುಳ್ಳ ವ್ಯಕ್ತಿ ಶಾಸಕನಾಗಿ ಮುಂದುವರೆಯಲು ಅನರ್ಹ, ಹೀಗಾಗಿ ಕೂಡಲೇ ಆತನನ್ನು ರಾಜ್ಯಪಾಲರು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸಾಗ್ಯ ಕೆಂಪಣ್ಣ ಮಾತನಾಡಿದರು. ಪ್ರಭಾರ ತಹಶೀಲ್ದಾರ್ ಬಿ.ವಿ.ಕುಮಾರ್ ಮನವಿ ಸ್ವೀಕರಿಸಿದರು.

ಹಾಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜು, ಮುಖಂಡರಾದ ಮರಿಸ್ವಾಮಿ, ವೀರಭದ್ರಯ್ಯ, ಶಾಂತರಾಜು, ಕುಮಾರ್, ಸುರೇಶ್, ಆನಂದ್ ಕುಮಾರ್, ಪ್ರಸಾದ್, ಯತೀಶ್, ಕುಮಾರ್, ರಾಜು, ಅಶೋಕ್, ಆನಂದ್, ಬಸಪ್ಪ, ಎಸ್.ಮಲ್ಲು, ಚಂದ್ರಹಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.