ADVERTISEMENT

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸಲು ವಿರೋಧ: ಚಾಮುಂಡಿ ಬೆಟ್ಟ ಚಲೋ ತಡೆದ ಪೊಲೀಸರು

ಬಜರಂಗಸೇನೆಯ ಕಾರ್ಯಕರ್ತರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:51 IST
Last Updated 15 ಸೆಪ್ಟೆಂಬರ್ 2025, 2:51 IST
ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆಗೆ ಮಾಡುವುದನ್ನು ವಿರೋಧಿಸಿ ‘ಚಾಮುಂಡಿ ಬೆಟ್ಟ ಚಲೋ’ ಹಮ್ಮಿಕೊಂಡಿದ್ದ ಬಜರಂಗಸೇನೆ ಕಾರ್ಯಕರ್ತರನ್ನು ಮಂಡ್ಯ ನಗರದಲ್ಲಿ ಪೊಲೀಸರು ತಡೆದರು
ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆಗೆ ಮಾಡುವುದನ್ನು ವಿರೋಧಿಸಿ ‘ಚಾಮುಂಡಿ ಬೆಟ್ಟ ಚಲೋ’ ಹಮ್ಮಿಕೊಂಡಿದ್ದ ಬಜರಂಗಸೇನೆ ಕಾರ್ಯಕರ್ತರನ್ನು ಮಂಡ್ಯ ನಗರದಲ್ಲಿ ಪೊಲೀಸರು ತಡೆದರು   

ಮಂಡ್ಯ: ಸಾಹಿತಿ ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆಗೆ ಮಾಡುವುದನ್ನು ವಿರೋಧಿಸಿ ಮೈಸೂರಿಗೆ ‘ಚಾಮುಂಡಿ ಬೆಟ್ಟ ಚಲೋ’ ಹಮ್ಮಿಕೊಂಡಿದ್ದ ಬಜರಂಗಸೇನೆ ಕಾರ್ಯಕರ್ತರನ್ನು ನಗರದಲ್ಲಿ ಪೊಲೀಸರು ಭಾನುವಾರ ಬಂಧಿಸಿ, ಆನಂತರ ಬಿಡುಗಡೆ ಮಾಡಿದರು.

ನಗರದ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ 50ಕ್ಕೂ ಹೆಚ್ಚು ಕಾರ್ಯಕರ್ತರು ಬಜರಂಗ ಸೇನೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್‌ ಅವರ ನೇತೃತ್ವದಲ್ಲಿ ಹೊರಡಲು ಸಜ್ಜಾಗಿದ್ದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಮ್ಮಯ್ಯ ಕಾಳಿಕಾಂಬ ದೇವಾಲಯದ ಪ್ರವೇಶ ದ್ವಾರದಲ್ಲಿಯೇ ಅವರನ್ನು ತಡೆದ ಬಂಧಿಸಿದರು.

ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧವಿದೆ. ದಯಮಾಡಿ ಎಲ್ಲಾ ಹೋರಾಟಗಾರರು ಸಹಕರಿಸಿ ನಮ್ಮಜೊತೆ ಬನ್ನಿ ಎಂದು ಬಂಧನ ಮಾಡಿ, ನಂತರ ಪೊಲೀಸ್‌ ಕವಾಯತು ಮೈದಾನಕ್ಕೆ ಕರೆದುಕೊಂಡು ಹೋಗಲಾಯಿತು. ಆನಂತರ ಕೆಲಕಾಲ ಬಂಧನದಲ್ಲಿರಿಸಿ ಬಿಡುಗಡೆ ಮಾಡಿದರು.

ADVERTISEMENT

ಬಜರಂಗ ಸೇನೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆ ಮಾಡುತ್ತಿರುವುದಕ್ಕೆ ನಮ್ಮೆಲ್ಲರ ವ್ಯಾಪಕ ವಿರೋಧವಿದೆ. ನಾವು ಮುಸಲ್ಮಾನರ ವಿರುದ್ಧವಿಲ್ಲ. ಭುವನೇಶ್ವರಿಯನ್ನು ದೇವರನ್ನಾಗಿ ಪೂಜೆ ಮಾಡಿ ದೌರ್ಜನ್ಯ ಮಾಡುತ್ತಿದ್ದಾರೆ ಎನ್ನುವ ಮನಸ್ಥಿತಿ ಇರುವ ವ್ಯಕ್ತಿ ಬಾನು ಮುಷ್ತಾಕ್‌ ಅವರ ಕೈಯಲ್ಲಿ ಉದ್ಘಾಟನೆ ಬೇಡ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಸಹ ಹಿಂದೂ ಭಾವನೆ ಮತ್ತು ನಂಬಿಕೆಯ ಮೇಲೆ ಕಠಿಣವಾಗಿ ನಡೆದುಕೊಳ್ಳುತ್ತಿದೆ. ದಸರಾ ಹಬ್ಬ ಉದ್ಘಾಟನೆಗೆ ಕರೆದಿರುವುದು ದುರಾಡಳಿತದ ಪರಮಾಧಿಕಾರ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬಜರಂಗಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರ್ಷ, ಮುಖಂಡರಾದ ಚೇತನ್, ಸತೀಶ್, ಮನು, ಯತೀಶ್, ಸವ್ಯಸಾಚಿ, ದೀಪಕ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.