ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಗುರುವಾರ (ಸೆ.25) ನಡೆಯಲಿರುವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೂರು ಆನೆಗಳು ಬುಧವಾರ ಸಂಜೆ ಪಟ್ಟಣಕ್ಕೆ ಬಂದಿಳಿದವು.
ಇಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣಕ್ಕೆ ಬಂದ ಮಹೇಂದ್ರ, ಲಕ್ಷ್ಮಿ ಮತ್ತು ಕಾವೇರಿ ಹೆಸರಿನ ಆನೆಗಳಿಗೆ ಭವ್ಯ ಸ್ವಾಗತ ಕೋರಲಾಯಿತು. ಗಜ ಪಡೆಗೆ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ ನೇತೃತ್ವದಲ್ಲಿ ವೈದಿಕರು ಸಾಂಪ್ರದಾಯಕ ಪೂಜೆ ಸಲ್ಲಿಸಿದರು. ಸರದಿಯಂತೆ ಪುಷ್ಪಾರ್ಚನೆ ಮಾಡಿದರು. ದೇವಾಲಯದ ಒಳಾವರಣದಲ್ಲಿ ಆನೆಗಳಿಗೆ ಆಹಾರ ನೀಡಿ ನೀರು ಕುಡಿಸಲಾಯಿತು. ಆನೆಗಳನ್ನು ನೂರಾರು ಮಂದಿ ಕುತೂಹಲದಿಂದ ವೀಕ್ಷಿಸಿದರು.
‘ತಾಲ್ಲೂಕಿನ ಕಿರಂಗೂರು ಬನ್ನಿ ಮಂಟಪದ ಬಳಿ ಗುರುವಾರ ಮಧ್ಯಾಹ್ನ 2.30ರಿಂದ 3 ಗಂಟೆ ಅವಧಿಯಲ್ಲಿ ಜಂಬೂ ಸವಾರಿ ಆರಂಭವಾಗಲಿದೆ. ಆಕರ್ಷಕ ಜಾನಪದ ಕಲಾ ತಂಡಗಳ ಸಹಿತ ಸುಮಾರು ನಾಲ್ಕು ಕಿ.ಮೀ. ದೂರ ಮೆರವಣಿಗೆ ಸಾಗಲಿದೆ. ಜನರು ಜಂಬೂ ಸವಾರಿ ವೀಕ್ಷಿಸಲು ಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಅಟ್ಟಣಿಗೆ ನಿರ್ಮಿಸಲಾಗಿದೆ. ಸಂಜೆ 6 ಗಂಟೆಗೆ ಜಂಬೂ ಸವಾರಿ ಶ್ರೀರಂಗನಾಥಸ್ವಾಮಿ ದೇವಾಲಯ ತಲುಪಲಿದೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಜಿ.ಪಂ. ಸಿಇಒ ಕೆ.ಆರ್. ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪುರಸಭೆ ಅಧ್ಯಕ್ಷ ಎಂ.ಎಲ್. ದಿನೇಶ್, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಚೇತನಾ ಯಾದವ್, ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.