ಮಂಡ್ಯ: ‘ಪ್ರತಿ ತಿಂಗಳು ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿರುವ ಬಗ್ಗೆ ಸರ್ಕಾರಕ್ಕೆ ಜಿ.ಪಿ.ಎಸ್ ಛಾಯಾಚಿತ್ರದೊಂದಿಗೆ ವರದಿಯನ್ನು ಕಳುಹಿಸಿಕೊಡಬೇಕಿದೆ. ಆದರೆ ಅಧಿಕಾರಿಗಳು 2 ತಿಂಗಳಿಂದ ವರದಿ ನೀಡಿಲ್ಲ. ಒತ್ತುವರಿ ತೆರವುಗೊಳಿಸಿ ಪೂರಕ ಮಾಹಿತಿ ನೀಡದಿದ್ದಲ್ಲಿ ಭೂ ಕಬಳಿಕೆ ಅಧಿನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಬಗ್ಗೆ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಎಚ್.ಎಲ್.ಬಿ.ಸಿ, ಕಾವೇರಿ ನೀರಾವರಿ ನಿಗಮ, ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಒಟ್ಟು 962 ಕೆರೆಗಳಿದ್ದು, ಇದರಲ್ಲಿ 448 ಕೆರೆಗಳು ಒತ್ತುವರಿಯಾಗಿದ್ದವು ಎಂದರು.
ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ವತಿಯಿಂದ ಕೆರೆಗಳ ಸುತ್ತಳತೆಯನ್ನು ಅಳತೆ ಮಾಡಿ ಕೊಡಲಾಗಿದೆ. 448 ಕೆರೆಗಳಲ್ಲಿ 245 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. 203 ಕೆರೆಗಳ ಒತ್ತುವರಿ ತೆರವುಗೊಳಿಸುವುದು ಬಾಕಿ ಇರುತ್ತದೆ ಎಂದರು.
ಕೆರೆಗಳು ಹಾಗೂ ನೀರಿನ ಮೂಲಗಳಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ವಿಸರ್ಜನೆ ಮಾಡುವುದು ಅಪರಾಧವಾಗಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಪಲಕಗಳನ್ನು ಕೆರೆಯ ಸುತ್ತ ಅಳವಡಿಸಿ. ಕೆರೆ ಒತ್ತುವರಿ, ಘನ ತ್ಯಾಜ್ಯ ಹಾಕುವುದು ಅಥವಾ ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ದೂರು ನೀಡಲು ದೂರು ಪರಿಹಾರ ಕೋಶ ತೆರೆದು ವರದಿ ನೀಡುವಂತೆ ತಿಳಿಸಿದರು.
ಪ್ರಕರಣ ವಿಲೇವಾರಿಗೊಳಿಸಿ: ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದಲ್ಲಿ ಕೆರೆಗಳಿಗೆ ಸಂಬಂಧಿಸಿದಂತೆ 2010ರಿಂದ 2024ರವರೆಗೆ ಮಂಡ್ಯ ತಾಲ್ಲೂಕು-19, ಮದ್ದೂರು-25, ನಾಗಮಂಗಲ-90, ಮಳವಳ್ಳಿ -5, ಶ್ರೀರಂಗಪಟ್ಟಣ-15, ಕೆ.ಆರ್.ಪೇಟೆ-4 ಒಟ್ಟು 158 ಪ್ರಕರಣಗಳು ದಾಖಲಾಗಿರುತ್ತದೆ. ಅವುಗಳನ್ನು ವಿಲೇವಾರಿ ಮಾಡಿ ಎಂದರು.
ಕೆರೆಗಳ ನೀರನ್ನು ಜಾನುವಾರುಗಳು ಸೇವಿಸುತ್ತವೆ. ನೀರು ಜಾನುವಾರುಗಳು ಕುಡಿಯಲು ಯೋಗ್ಯವಾಗಿದೆಯೇ ಎಂಬುದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಿ ವರದಿ ಸಲ್ಲಿಸಿ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಲ್ಲಿ ನೀರಿನ ಪರೀಕ್ಷೆಗೆ ಅವಕಾಶವಿದ್ದು, ಇದಕ್ಕೆ ₹625 ಶುಲ್ಕ ವಿಧಿಸಲಾಗುವುದು ಎಂದರು.
ನರೇಗಾ ಯೋಜನೆಯಡಿ ಸಣ್ಣ ಕೆರೆಗಳ ಸುತ್ತ ಹಸಿರು ಗಿಡಗಳನ್ನು ನೆಟ್ಟು ಕೆರೆ ಒತ್ತುವರಿಯಾಗದಂತೆ ಸಂರಕ್ಷಿಸಲು ಅವಕಾಶವಿದೆ ಬಳಸಿಕೊಳ್ಳಿ. ಇದಲ್ಲದೇ ಸಿ.ಎಸ್.ಆರ್ ಅನುದಾನ ಬಳಸಿಕೊಂಡು ತಾಲ್ಲೂಕಿನಲ್ಲಿ ಒಂದೊಂದು ಕೆರೆಯ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಬಹುದು. ಈ ಹಿನ್ನೆಲೆಯಲ್ಲಿ ಕೆರೆಗಳ ಹೆಸರನ್ನು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿ.ಡಿ.ಎಲ್.ಆರ್ ಉಪನಿರ್ದೇಶಕ ವಿರೂಪಾಕ್ಷ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.