ADVERTISEMENT

ಕೊಂಡೋತ್ಸವದಲ್ಲಿ ಕಾದಿದ್ದ ಜವರಾಯ: ಮನೆ ಮೇಲ್ಭಾಗದ ತಡೆಗೋಡೆ ಕುಸಿದು ಮಹಿಳೆ ಸಾವು

ಹುಲಿಗೆರೆಪುರದಲ್ಲಿ ಮನೆ ಮೇಲ್ಭಾಗದ ತಡೆಗೋಡೆ ಕುಸಿದು ಮಹಿಳೆ ಸಾವು, 44 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 1:58 IST
Last Updated 30 ಮಾರ್ಚ್ 2022, 1:58 IST
ಪುಟ್ಟಲಿಂಗಮ್ಮ
ಪುಟ್ಟಲಿಂಗಮ್ಮ   

ಮದ್ದೂರು: ತಾಲ್ಲೂಕಿನ ಹುಲಿಗೆರೆಪುರದಲ್ಲಿ ಮಂಗಳವಾರ ಬೆಳಿಗ್ಗೆ 5.30ರ ಸುಮಾರಿಗೆ ಬಸವೇಶ್ವರ ಸ್ವಾಮಿ ದೇವಸ್ಥಾನದ ಕೊಂಡೋತ್ಸವ ದಲ್ಲೇ ಜವರಾಯ ಕಾದಿದ್ದ. ದೇವಸ್ಥಾನದ ಮುಂದಿದ್ದ ಪಟೇಲ್ ಸಿದ್ದೇಗೌಡ ಅವರ ಮನೆ ಮೇಲೆ ನಿಂತು ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದ ಭಕ್ತರಿಗೆ ಅಪಾಯದ ಅರಿವಿರಲಿಲ್ಲ. ಆದರೆ ಕ್ಷಣ ಮಾತ್ರದಲ್ಲೇ ಮನೆ ಮೇಲ್ಭಾಗದ ತಡೆಗೋಡೆ ಕುಸಿದು ದುರಂತ ಸಂಭವಿಸಿತ್ತು.

ಗ್ರಾಮದ ಮಹಿಳೆ ಪುಟ್ಟಲಿಂಗಮ್ಮ (45) ಅವರ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟರು. 44 ಮಂದಿ ಗಾಯಗೊಂಡರು.

ಸಣ್ಣ-ಪುಟ್ಟ ಗಾಯಗಳಾಗಿದ್ದ ನಾಲ್ವರು ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, 39 ಮಂದಿಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಆ ಪೈಕಿ 10 ಮಂದಿ ಮಕ್ಕಳು ಸೇರಿದ್ದಾರೆ. ತೀವ್ರವಾಗಿ ಗಾಯಗೊಂಡ ಅದೇ ಗ್ರಾಮದ ಸರೋಜಮ್ಮ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ADVERTISEMENT

ಘಟನೆಯು ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಮದ್ದೂರಿನ ಸಿಪಿಐಗಳಾದ ಹರೀಶ್ ಗೌಡ ಹಾಗೂ ಭರತ್ ಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಗಾಯಾಳುಗಳನ್ನು ಪೊಲೀಸ್ ವಾಹನಗಳಲ್ಲಿಯೇ ತುರ್ತಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು.

ಮಹಿಳೆ ಕುಟುಂಬಕ್ಕೆ ವೈಯಕ್ತಿಕ ₹ 1 ಲಕ್ಷ ನೀಡಿದ ಸಚಿವ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿ, ನಾಲ್ವರು ಗಾಯಾಳುಗಳಿಗೆ ಧೈರ್ಯ ಹಾಗೂ ಮೃತ ಮಹಿಳೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೃತ ಮಹಿಳೆಯ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ₹ 1 ಲಕ್ಷ ಪರಿಹಾರ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಸರ್ಕಾರದಿಂದ ₹ 5 ಲಕ್ಷ ಪರಿಹಾರ ನೀಡಲಾಗುವುದು’ ಎಂದರು.

‘ಜಾತ್ರಾ ಮಹೋತ್ಸವಗಳ ವೇಳೆಯಲ್ಲಿ ಇಂಥ ಅವಘಡಗಳು ಸಂಭವಿಸದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಗಾಯಾಳುಗಳಿಗೆ ಚಿಕಿತ್ಸೆ ದೊರಕಿಸಲಾಗುವುದು’ ಎಂದರು.

ಮನ್‌ಮುಲ್ ನಿರ್ದೇಶಕ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮೃತರ ಕುಟುಂಬಕ್ಕೆ ₹ 25 ಸಾವಿರ ಪರಿಹಾರ ನೀಡಿದರು.

ಶಾಸಕ ಡಿ.ಸಿ. ತಮ್ಮಣ್ಣ, ಜಿಲ್ಲಾಧಿಕಾರಿ ಡಾ.ಅಶ್ವಥಿ, ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ , ಡಿ.ವೈ.ಎಸ್.ಪಿ ಲಕ್ಷ್ಮಿನಾರಾಯಣ್ ಪ್ರಸಾದ್, ಜಿ.ಪಂ ಸಿಇಒ ದಿವ್ಯಾಪ್ರಭು, ಜಿಲ್ಲಾ ವೈದ್ಯಾಧಿಕಾರಿ ಡಾ.ಧನಂಜಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಇದ್ದರು.

ಆರೋಗ್ಯ ವಿಚಾರಣೆ

ಮಂಡ್ಯ: ನಗರದ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಗೋಪಾಲಯ್ಯ, ‘ಹುಲಿಗೆರೆಪುರ ಗ್ರಾಮದ ಹಬ್ಬದ ಕೊಂಡೋತ್ಸವದಲ್ಲಿ ನಡೆದ ಘಟನೆ ಬೇಸರ ತರಿಸಿದೆ. ಒಬ್ಬ ಮಹಿಳೆಯು ಸಾವನ್ನಪ್ಪಿರುವುದು ಮನಸ್ಸಿಗೆ ತುಂಬಾ ನೋವಾಗಿದೆ’ ಎಂದರು.

‘ಜಿಲ್ಲಾಡಳಿತದಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ ಎಂಬುದು ಸುಳ್ಳು. ಜಿಲ್ಲಾಧಿಕಾರಿ, ಸಿಇಒ, ಎಸ್ಪಿ ಅವರು ಸಹ ಹೊಂದಾಣಿಕೆಯಿಂದ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ತಹಶೀಲ್ದಾರ್ ವಿಚಾರದಲ್ಲಿಯೇ ಆಗಲಿ, ಯಾರೇ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿದೆ, ಅವರು ತಪ್ಪು ಮಾಡಿಲ್ಲ ಎಂಬುದಾದರೆ ಮಾಹಿತಿ ನೀಡಿ ಈಗಲೇ ಅಮಾನತು ತೆರವುಗೊಳಿಸಲಾಗುವುದು’ ಎಂದು ತಿಳಿಸಿದರು.

ಶಾಸಕ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಒ ದಿವ್ಯಾಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯಕುಮಾರ್ ಭಾಗವಹಿಸಿದ್ದರು.

ಗಾಯಾಳುವಿಗೆ ಧೈರ್ಯ ತುಂಬಿದರು

ಮಂಡ್ಯ: ಹಬ್ಬಗಳಲ್ಲಿ ಇಂಥ ಘಟನೆ ನಡೆಯಬಾರದಿತ್ತು. ಗಾಯಾಳುಗಳಿಗೆ ಸಾಂತ್ವನ ಹೇಳಲಾಗಿದೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೊಂಡೊತ್ಸವ, ಜಾತ್ರೆ, ಹಬ್ಬ ಹರಿದಿನಗಳು ಜಿಲ್ಲೆಯ ಸಂಪ್ರದಾಯಗಳಾಗಿವೆ. ಆದರೆ, ಇಂಥ ಘಟನೆ ನಡೆಯಬಾರದಿರುವುದು ಬೇಸರದ ಸಂಗತಿ,ಎಲ್ಲ ಗಾಯಾಳುಗಳು ಶೀಘ್ರ ಗುಣಮುಖರಾಗಿ ಬಿಡುಗಡೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.