
ಮಂಡ್ಯ: ‘ಜನಪದ ಗೀತೆಗಳನ್ನು ಅನಕ್ಷರಸ್ಥರು ಹಾಡುತ್ತಿದ್ದ ಕಾಲಘಟ್ಟದಲ್ಲಿ ಕನ್ನಡ ಭಾಷಾಭಿಮಾನಕ್ಕೆ ಕೊರತೆ ಇರಲಿಲ್. ಆದರೆ ಅಕ್ಷರಸ್ಥರು ಹೆಚ್ಚಾದಂತೆಲ್ಲ ಭಾಷಾಭಿಮಾನಕ್ಕೆ ಕೊರತೆ ಕಾಣುತ್ತಿದೆ’ ಎಂದು ಬೆಂಗಳೂರಿನ ಸಮಗ್ರ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಆವರಣದಲ್ಲಿ ಜಿ.ವಿ.ಕೆ.ಪ್ರತಿಷ್ಠಾನದ ವತಿಯಿಂದ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರೈತರು ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿಯೂ ಜನಪದ ಹಾಡುಗಳ ಗುಣಗಾನವು ಕೇಳುವುದಕ್ಕೆ ಮುದ ನೀಡುತ್ತಿತ್ತು. ಕನ್ನಡ ಭಾಷೆ ಕರ್ನಾಟಕಕ್ಕೆ ಮೀಸಲಾಗಿಲ್ಲ ಬದಲಿಗೆ ಎಲ್ಲ ಭಾಷಿಗರು ನಮ್ಮ ರಾಜ್ಯದಲ್ಲಿ ಸಿಗುತ್ತಾರೆ. ಆದರೂ ಕನ್ನಡಕ್ಕೆ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ. ಕನ್ನಡಕ್ಕೆ ಕುತ್ತು ಬಂದಾಗ ಅದರ ಉಳಿವಿಗೆ ಕಾವಲು ಪಡೆಗಳನ್ನೇ ರಚನೆ ಮಾಡಿಕೊಂಡು ಕನ್ನಡ ಭಾಷಾಭಿಮಾನ ತೋರಿದ್ದೇವೆ’ ಎಂದು ಶ್ಲಾಘಿಸಿದರು.
ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ, ‘ಭಾರತದಲ್ಲಿ ಇಂಗ್ಲಿಷ್ ಭಾಷೆ ತನ್ನ ಪ್ರಭಾವ ಬೀರಿದೆ. ಏನೇ ಆದರೂ ನಮ್ಮ ಮಾತೃಭಾಷೆಯನ್ನು ಎಲ್ಲಿಯೂ ಬಿಟ್ಟುಕೊಡಬಾರದು ಎಂದು ಕರೆ ನೀಡಿದರು.
ಜಿ.ವಿ.ಕೆ.ಪ್ರತಿಷ್ಠಾನದ ಅಧ್ಯಕ್ಷ ಆರ್.ವಾಸು ಮಾತನಾಡಿ, ‘ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ನಮ್ಮ ಪ್ರತಿಷ್ಠಾನ ಕೆಲಸ ಮಾಡಿಕೊಂಡು ಬರುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಸಾಮಾಗ್ರಿಗಳು ಸೇರಿದಂತೆ ಅಗತ್ಯ ಸಲಕರಣೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದೇವೆ. ಕನ್ನಡ ನಾಡು ನುಡಿ ಸಂಸ್ಕೃತಿಯ ಪ್ರತೀಕವಾಗಿ ಹೆಚ್ಚು ಕೆಲಸಗಳನ್ನು ಮಾಡಿಕೊಂಡು ಬರುತ್ತೇವೆ’ ಎಂದು ಭರವಸೆ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪುಟ್ಟಸ್ವಾಮಿಗೌಡ (ಉತ್ತಮ ರೈತ), ಗೌರಿ ಪ್ರಕಾಶ್ ಹಾಗೂ ಎನ್.ಟಿ.ಮಹಂತೇಶ್(ಕಾಯಕ ಯೋಗಿ), ಅರಕೇಶ್ವರ(ಕರಕುಶಳ ಕಲಾ), ಜಿ.ವಿ.ರಾಮಚಂದ್ರ ಸಮಾಜ ಸೇವಾ ಪ್ರಶಸ್ತಿಯನ್ನು ಜಿವಿಕೆ ಹೆಸರಿನಲ್ಲಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿವಿಕೆ ಸಂಸ್ಥೆಯ ವಿ.ಸಿ.ಗೋವಿಂದರಾಜು, ಸದಸ್ಯ ಎಲ್.ಧನರಾಜ್, ಸಲಹೆಗಾರ ಮಧುಸೂದನ್, ನಿವೃತ್ತ ಮುಖ್ಯಶಿಕ್ಷಕ ಪಿ.ರಾಮಮೂರ್ತಿ, ನಿವೃತ್ತ ಉಪನ್ಯಾಸಕ ಶಂಕರೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.