ADVERTISEMENT

ಭೂತಬಂಗಲೆಯಂತಾದ ವಸತಿನಿಲಯಗಳು

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 20:32 IST
Last Updated 9 ಅಕ್ಟೋಬರ್ 2019, 20:32 IST
ಕೆ.ಆರ್‌.ಪೇಟೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ನಿರ್ಮಿಸುತ್ತಿರುವ ವಿದ್ಯಾರ್ಥಿನಿಲಯದ ಕಾಮಗಾರಿ ಸ್ಥಗಿತಗೊಂಡಿದೆ (ಎಡಚಿತ್ರ). ವಿದ್ಯಾರ್ಥಿ ನಿಲಯದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ
ಕೆ.ಆರ್‌.ಪೇಟೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ನಿರ್ಮಿಸುತ್ತಿರುವ ವಿದ್ಯಾರ್ಥಿನಿಲಯದ ಕಾಮಗಾರಿ ಸ್ಥಗಿತಗೊಂಡಿದೆ (ಎಡಚಿತ್ರ). ವಿದ್ಯಾರ್ಥಿ ನಿಲಯದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ   

ಕೆ.ಆರ್.ಪೇಟೆ: ವಿದ್ಯಾರ್ಥಿಗಳ ಪಾಲಿಗೆ ಆಶ್ರಯ ತಾಣವಾಗಬೇಕಿದ್ದ ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ವಸತಿನಿಲಯದ ಕಾಮಗಾರಿ ಸ್ಥಗಿತಗೊಂಡಿದ್ದು, ಭೂತಬಂಗಲೆಯಾಗಿ ಪರಿವರ್ತನೆಯಾಗಿದೆ.

ಗ್ರಾಮಾಂತರ ಪ್ರದೇಶದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, 2 ವರ್ಷಗಳ ಹಿಂದೆಯೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ತಲಾ ₹1.5 ಕೋಟಿ ವೆಚ್ಚದ ವಿದ್ಯಾರ್ಥಿ ನಿಲಯಗಳ ನಿರ್ಮಾಣದ ಜವಾಬ್ದಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಲಾಗಿತ್ತು. ಕಾಮಗಾರಿಗೆ ಚಾಲನೆ ನೀಡಿ ಎರಡು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಕಟ್ಟಡಗಳ ಸುತ್ತಲೂ ಗಿಡಗಂಟಿಗಳು, ಹುಲ್ಲು ಬೆಳೆದಿದ್ದು, ಭೂತದ ಬಂಗಲೆಯಂತೆ ಗೋಚರಿಸುತ್ತಿದೆ.

ADVERTISEMENT

ವಿದ್ಯಾರ್ಥಿನಿಲಯಗಳ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ. ಎರಡೂ ಕಟ್ಟಡಗಳಿಗೆ ಸೇರಿ ಇನ್ನೂ ₹50 ಲಕ್ಷ ಬಿಡುಗಡೆ ಆಗದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಸದ್ಯ, ವಿದ್ಯಾರ್ಥಿಗಳ ವಸತಿನಿಲಯದ ಕಟ್ಟಡ ಹಾಗೂ ನೆಲಹಾಸು ಪೂರ್ಣಗೊಂಡಿದೆ. ಆದರೆ, ವಿದ್ಯುತ್‌ ಸಂಪರ್ಕ, ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ದೀಪಗಳ ಅಳವಡಿಕೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ‘ಪ್ರಜಾವಾಣಿ’ಗೆ
ತಿಳಿಸಿದರು.

ಕಾಮಗಾರಿಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಗೂ ಪತ್ರ ಬರೆಯಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭೂಸೇನಾ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.‌

ವಿದ್ಯಾರ್ಥಿನಿಲಯದ ಕಟ್ಟಡ ಪೂರ್ಣಗೊಳ್ಳದ ಕಾರಣ ವಿದ್ಯಾರ್ಥಿನಿಯರು ಖಾಸಗಿ ಪೇಯಿಂಗ್‌ ಗೆಸ್ಟ್‌ಗಳನ್ನು (ಪಿ.ಜಿ) ಅವಲಂಬಿಸುವಂತಾಗಿದೆ.

‘ನಾವು ದೂರದ ಊರುಗಳಿಂದ ಬಂದು ಎಂಜಿನಿಯರಿಂಗ್ ಪದವಿ ಓದುತ್ತಿದ್ದೇವೆ. ಆದರೆ, ಇಲ್ಲಿ ವಸತಿ ನಿಲಯವಿಲ್ಲದೆ, ಪೇಯಿಂಗ್‌ ಗೆಸ್ಟ್‌ನಲ್ಲಿ ದುಬಾರಿ ಶುಲ್ಕ ಕೊಟ್ಟು ಉಳಿದುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿನಿ ರಶ್ಮಿ ಅಳಲು ತೋಡಿಕೊಂಡರು.

ಕಾಮಗಾರಿ ಬಗ್ಗೆ ಮಾಹಿತಿ ಪಡೆಯಲು ಭೂಸೇನಾ ನಿಗಮದ ಎಂಜಿನಿಯರ್‌ಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

ವಸತಿನಿಲಯದ ಕಿಟಕಿ, ಬಾಗಿಲು ಜಖಂ

ಇದೇ ಕ್ಯಾಂಪಸ್‌ನಲ್ಲಿ ಪಾಲಿಟೆಕ್ನಿಕ್‌ ಕಾಲೇಜು ಸಹ ಇದೆ. ಇಲ್ಲಿ ನಿರ್ಮಿಸಿರುವ ವಿದ್ಯಾರ್ಥಿನಿಲಯದ ಸುತ್ತಲೂ ಆಳೆತ್ತರದ ಗಿಡ–ಮರಗಳು ಬೆಳೆದಿವೆ. ಕಾಮಗಾರಿ ಪೂರ್ಣಗೊಂಡಿದ್ದರೂ ವಿದ್ಯಾರ್ಥಿಗಳ ಬಳಕೆಗೆ ಅವಕಾಶ ನೀಡಿಲ್ಲ. ಹೊಸ ಕಟ್ಟಡವಾದರೂ ಕಿಟಕಿ, ಬಾಗಿಲುಗಳು ಜಖಂಗೊಂಡಿವೆ. ಹಳೇ ಕಟ್ಟಡದಂತೆ ಕಾಣುತ್ತಿದೆ.

ವಸತಿ ನಿಲಯ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿಲಯಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಪಾಲಿಟೆಕ್ನಿಕ್‌ ಕಾಲೇಜಿನ ವಸತಿ ನಿಲಯದ ಕಟ್ಟಡ ಪೂರ್ಣಗೊಂಡರೂ ವಿದ್ಯಾರ್ಥಿಗಳಿಗೆ ಅದು ಲಭ್ಯವಾಗಿಲ್ಲ ಎಂದು ಪುರಸಭಾ ಸದಸ್ಯ ಎಚ್.ಆರ್.ಲೋಕೇಶ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.