ಮಂಡ್ಯ: ‘ಗೋಮಾಳ ಜಾಗದಲ್ಲಿ 30 ಗುಂಟೆಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಹೊಂಡ ನಿರ್ಮಿಸಿರುವ ವ್ಯಕ್ತಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಬೊಪ್ಪಸಮುದ್ರ ಗ್ರಾಮದ ಬಿ.ಪಿ.ಪ್ರಭುಸ್ವಾಮಿ ಒತ್ತಾಯಿಸಿದರು.
ಜಿಲ್ಲೆಯ ಮದ್ದೂರು ತಾಲ್ಲೂಕು ಬೊಪ್ಪಸಮುದ್ರ ಗ್ರಾಮದ ಸ.ನಂ.70ರ ಸರ್ಕಾರಿ ಭೂಮಿಯಲ್ಲಿದ್ದ ಕಟ್ಟೆಯನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ ವಿರುದ್ಧ ಕಂದಾಯ ಇಲಾಖೆ ಆಯುಕ್ತರು ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಆರೋಪಿಸಿದರು.
‘ಸ.ನಂ. 70ರ ಪೈಕಿ 30 ಗುಂಟೆ ಜಮೀನಿನಲ್ಲಿ 10 ಗುಂಟೆ ಸರ್ಕಾರಿ ಬಿ ಖರಾಬು ಜಮೀನು ಒಳಗೊಂಡಂತೆ ಒತ್ತುವರಿ ಮಾಡಿರುವುದು ದೃಢಪಟ್ಟಿದೆ. ಕೂಡಲೇ ಒತ್ತುವರಿ ತೆರವಿಗೆ ಕ್ರಮ ಕೈಗೊಂಡು ಒತ್ತುವರಿದಾರರ ವಿರುದ್ಧ ಕರ್ನಾಟಕ ಭೂ ಕಂದಾಯ ಅನಿಯಮ 1964ರ ಕಲಂ 192 (ಎ) ಮತ್ತು (ಬಿ) ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಹೇಳಿದರು.
‘ಜಮೀನು ಒತ್ತುವರಿ ಮಾಡಿರುವ ಬಿ.ಎಂ.ನಂಜೇಗೌಡ ಅವರಿಗೆ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದಿಂದ ‘ಶ್ರೀಮತಿ ಲಿಂಗಮ್ಮ ದೊಡ್ಡತಿಮ್ಮೇಗೌಡ ಕೃಷಿಕ ಪ್ರಶಸ್ತಿ’ಯನ್ನು ಪ್ರದಾನ ಮಾಡುತ್ತಿರುವುದು ದುರ್ದೈವ. ಇದೆಲ್ಲವನ್ನು ಮನಗಂಡು ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.