ಶ್ರೀರಂಗಪಟ್ಟಣ: ‘ತ್ರಿವಿಧ ದಾಸೋಹದ ಮೂಲಕ ಸಮಾಜದ ಉದ್ಧಾರಕ್ಕಾಗಿ ಅನುಪಮ ಸೇವೆ ಸಲ್ಲಿಸಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು’ ಎಂದು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ. ಶಂಕರಬಾಬು ಆಗ್ರಹಿಸಿದರು.
ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಮಂಡ್ಯ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿಯಲ್ಲಿ ಅವರು ಮಾತನಾಡಿದರು.
‘ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ಕ್ಷೇತ್ರದಲ್ಲಿ ದೇಶದಲ್ಲೇ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ಮತ, ಪಂಥದ ಭೇದವಿಲ್ಲದೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿದ್ದಾರೆ. ರಾಜಕೀಯದ ಸೋಂಕು ಇಲ್ಲದಂತೆ ನಿಸ್ಕಾಮ ಸೇವೆ ಸಲ್ಲಿಸಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದರೆ ಆ ಪ್ರಶಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚುತ್ತದೆ’ ಎಂದು ಹೇಳಿದರು.
ಕಿರಂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎ. ಪ್ರಶಾಂತಬಾಬು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಅವರು ಶಿಸ್ತು ಮತ್ತು ಸಮಯ ಪರಿಪಾಲನೆಗೆ ಹೆಸರಾಗಿದ್ದರು. ದಿನದಲ್ಲಿ 18 ಗಂಟೆಗಳ ಕಾಲ ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುತ್ತಿದ್ದರು. ಅಪ್ಪಟ ಸನ್ಯಾಸಿಯಂತೆ ಸರಳ ಮತ್ತು ಸಜ್ಜನಿಕೆಯಿಂದ ಬದುಕಿದ ಶಿವಕುಮಾರ ಸ್ವಾಮೀಜಿ ಅವರು ಇತರ ಮಠಾಧೀಶರಿಗೆ ಮಾದರಿಯಾಗಿದ್ದಾರೆ’ ಎಂದರು.
ದರಸಗುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್. ರಾಮಚಂದ್ರು, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಬಿ.ಎಸ್. ರಮೇಶ್, ವಕೀಲ ನೆಲಮನೆ ರವಿಕುಮಾರ್, ಲೈನ್‌ಮನ್ ಶ್ರೀಧರ್, ಆಶಾ ಕಾರ್ಯಕರ್ತೆ ರೇಖಾ, ದಿಲೀಪ್‌ಕುಮಾರ್ ಕುಮಾರ್, ಬಸವಣ್ಣ, ಚಂದ್ರಮೌಳೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್, ಕಾಲ ಭೈರವೇಶ್ವರಸ್ವಾಮಿ ದೇಗುಲದ ಅರ್ಚಕ ವೀರಪ್ಪ, ಪ್ರಜ್ವಲ್, ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಗ್ರಾಮಂತರ ಪೊಲೀಸ್ ಠಾಣೆ ಸಿಪಿಐ ಬಿ.ಜಿ. ಕುಮಾರ್, ಮಂಡ್ಯ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಬಳ್ಳೇಕೆರೆ ಶ್ರೀಕಾಂತ್, ಕಾರ್ಯದರ್ಶಿ ವೀಣಾಬಾಯಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಚ್. ಜಗದೀಶಗೌಡ, ಉಪನ್ಯಾಸಕ ಸತ್ಯಮೂರ್ತಿ, ಪ್ರಮೋದ್, ಹರೀಶ್, ಕೂಡಲಕುಪ್ಪೆ ಕುಮಾರ್, ಅಂಕಶೆಟ್ಟಿ, ಭಾಗ್ಯಮ್ಮ, ಜಯಲಕ್ಷ್ಮಮ್ಮ, ಹೋಟೆಲ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.