ADVERTISEMENT

ಮಂಡ್ಯ ಜಿಲ್ಲೆಯಲ್ಲಿ 103 ಡೆಂಗಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:02 IST
Last Updated 17 ಸೆಪ್ಟೆಂಬರ್ 2025, 4:02 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡೆಂಗಿ ನಿಯಂತ್ರಣ ಸಹಕರಿಸದವರಿಗೆ ಜುಲ್ಮಾನೆ/ ದಂಡ ವಿಧಿಸುವ ಕುರಿತು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಯಿತು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಪಾಲ್ಗೊಂಡಿದ್ದರು 
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡೆಂಗಿ ನಿಯಂತ್ರಣ ಸಹಕರಿಸದವರಿಗೆ ಜುಲ್ಮಾನೆ/ ದಂಡ ವಿಧಿಸುವ ಕುರಿತು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಯಿತು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಪಾಲ್ಗೊಂಡಿದ್ದರು    

ಮಂಡ್ಯ: ಡೆಂಗಿ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ನಿಯಂತ್ರಣ ಮಾಡಲು ಸಹಕರಿಸದಿದ್ದರೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡೆಂಗಿ ನಿಯಂತ್ರಣ ಸಹಕರಿಸದವರಿಗೆ  ದಂಡ ವಿಧಿಸುವ ಕುರಿತು ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸ್ತುತ 103 ಡೆಂಗಿ, 11 ಚಿಕುನ್‌ಗುನ್ಯಾ ಪ್ರಕರಣಗಳು ದಾಖಲಾಗಿವೆ. ಹೆಚ್ಚಾಗಿ ವಲಸಿಗರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ಕಂಡು ಬರುತ್ತಿವೆ. ಕಬ್ಬು ಕಟ್ಟಾವು ಮಾಡಲು ಸರಿಸುಮಾರು 25 ಸಾವಿರಕ್ಕೂ ಹೆಚ್ಚಿನ ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅವರೆಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸೊಳ್ಳೆ ಪರದೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಈಗಾಗಲೇ ಸಂಬಂಧಪಟ್ಟ ಕಾರ್ಖಾನೆಗಳಿಗೆ ಸೂಚಿಸಲಾಗಿದೆ ಎಂದರು.

ADVERTISEMENT

ಆರೋಗ್ಯ ಇಲಾಖಾ ಅಧಿಕಾರಿಗಳು ವಲಸಿಗರಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಲಸಿಗರಿಗೆ ಸರಿಯಾದ ಮೂಲಭೂತ ಸೌಕರ್ಯ ನೀಡದಿರುವ ಕಾರ್ಖಾನೆಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ. ಜಿಲ್ಲೆಯಲ್ಲಿ ಡೆಂಗ್ಯೂ ನಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ, ವಿಶೇಷ ಶಿಬಿರಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ತಿಳಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್, ಸರ್ವೇಕ್ಷಣಾಧಿಕಾರಿ ಡಾ.ಕುಮಾರ, ಡಿ.ವಿ.ಬಿ.ಡಿ.ಸಿ ಅಧಿಕಾರಿ ಕಾಂತರಾಜು, ಆರ್.ಸಿ.ಎಚ್ ಅಧಿಕಾರಿ ಡಾ.ಕೆ.ಪಿ. ಅಶ್ವತ್ಥ್‌, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ನಿವೃತ್ತ ಡಿಎಚ್ಒ ಡಾ.ಟಿ.ಎನ್ ಮರೀಗೌಡ ಹಾಜರಿದ್ದರು. 

ನೋಟಿಸ್‌ ಜಾರಿಗೊಳಿಸಿ: ಡಿ.ಸಿ

‘ಮನೆ ವಾಣಿಜ್ಯ ಸಂಸ್ಥೆಗಳು ಶಾಲಾ ಕಾಲೇಜು ಹೋಟೆಲ್ ಕಟ್ಟಡ ನಿರ್ಮಾಣ ಕಾರ್ಯ ಪಾಳು ಬಿದ್ದ ನಿವೇಶನ ಖಾಲಿ ನಿವೇಶನಗಳಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಎಲ್ಲಾದರೂ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇರುವ ಜಾಗಗಳು ಇದ್ದಲ್ಲಿ ಮಾಲೀಕರಿಗೆ ಸೊಳ್ಳೆಗಳ ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ನೋಟಿಸ್ ಜಾರಿಗೊಳಿಸಿ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು. ನೋಟಿಸ್ ಜಾರಿ ಮಾಡಿದ ನಂತರವು ನಿರ್ದಿಷ್ಟ ಸಮಯದೊಳಗೆ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದಲಿ ಅಂತಹ ಮಾಲೀಕರಿಗೆ ದಂಡ ವಿಧಿಸಲಾಗುವುದು. ಮನೆಗಳ ಹೊರಾಂಗಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಕಂಡು ಬಂದರೆ ನಗರ ಪ್ರದೇಶದಲ್ಲಿ ₹800 ಗ್ರಾಮೀಣ ಪ್ರದೇಶದಲ್ಲಿ ₹400 ವಾಣಿಜ್ಯ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ಕಂಡು ಬಂದರೆ ನಗರ ಪ್ರದೇಶದಲ್ಲಿ ₹2000 ಗ್ರಾಮೀಣ ಪ್ರದೇಶದಲ್ಲಿ ರೂ ₹1000. ನಿರ್ಮಾಣ ಕಾರ್ಯದಲ್ಲಿ ಕಂಡು ಬಂದರೆ ನಗರ ಪ್ರದೇಶದಲ್ಲಿ ₹4000 ಗ್ರಾಮೀಣ ಪ್ರದೇಶದಲ್ಲಿ ₹2000 ದಂಡವನ್ನು ವಿಧಿಸಲಾಗುವುದು ಆದಾಗ್ಯೂ ದಂಡದ ಮೊತ್ತ ಪಾವತಿಸದಿದಲ್ಲಿ ಪ್ರತಿ ದಿನಕ್ಕೆ ಶೇ 50ರಷ್ಟು ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.