ADVERTISEMENT

ದಂತ ಚಿಕಿತ್ಸೆಯ ‘ಆಶಾಕಿರಣ’ಕ್ಕೆ ಚಾಲನೆ: ಸಚಿವ ಚಲುವರಾಯಸ್ವಾಮಿ

ಕಡಿಮೆ ವೆಚ್ಚದಲ್ಲಿ ದಂತ ಸಮಸ್ಯೆಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:53 IST
Last Updated 5 ನವೆಂಬರ್ 2025, 7:53 IST
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಮಿಮ್ಸ್) ಆಯೋಜಿಸಿದ್ದ ‘ದಂತ ಚಿಕಿತ್ಸೆಯ ಆಶಾಕಿರಣ’ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಇಸಿಜಿ ಯಂತ್ರಗಳನ್ನು ವಿತರಿಸಿದರು 
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಮಿಮ್ಸ್) ಆಯೋಜಿಸಿದ್ದ ‘ದಂತ ಚಿಕಿತ್ಸೆಯ ಆಶಾಕಿರಣ’ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಇಸಿಜಿ ಯಂತ್ರಗಳನ್ನು ವಿತರಿಸಿದರು    

ಮಂಡ್ಯ: ‘ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ವಸಡುಗಳ ಬದಲಾವಣೆ ಸೇರಿದಂತೆ ದಂತ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಾರಂಭಿಕವಾಗಿ ಮಳವಳ್ಳಿ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ದಂತ ಚಿಕಿತ್ಸೆಯ ಆಶಾಕಿರಣ ಯೋಜನೆಯ ಚಿಕಿತ್ಸೆ ಲಭ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಮಿಮ್ಸ್) ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ‘ದಂತ ಚಿಕಿತ್ಸೆಯ ಆಶಾಕಿರಣ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ದಂತ ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ರಾಜ್ಯದಲ್ಲಿಯೇ ಪ್ರಥಮವಾಗಿ ‘ಗ್ರಾಮಗಳಲ್ಲಿ ಮುಗುಳ್ನಗೆಯ ಸಿಂಚನ’ ಎನ್ನುವ ವಿಶೇಷ ಯೋಜನೆ ಜಾರಿಗೊಳಿಸಿತ್ತು. ಇದೀಗ ಶಸ್ತ್ರಚಿಕಿತ್ಸೆಗೂ ಅನುಕೂಲವಾಗುವಂತೆ ‘ಆಶಾಕಿರಣ’ ಕಾರ್ಯಕ್ರಮ ಅನುಷ್ಠಾನಗೊಳ್ಳಿದೆ ಎಂದರು.

ADVERTISEMENT

ಕಡಿಮೆ ಮೊತ್ತದಲ್ಲಿ ಚಿಕಿತ್ಸೆ

ಜಿಲ್ಲೆಯಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ದಂತ ಚಿಕಿತ್ಸೆಯ ಆಶಾಕಿರಣ ಯೋಜನೆಯಡಿ ನುರಿತ ದಂತ ವೈದ್ಯರು ಆಗಮಿಸಿ ತಪಾಸಣೆ ನಡೆಸುವ ವ್ಯವಸ್ಥೆ ಮಾಡಲಾಗುವುದು. ₹30 ಸಾವಿರದಿಂದ ₹40 ಸಾವಿರ ತಗುಲುವ ಚಿಕಿತ್ಸೆಗಳನ್ನು ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ₹2 ಸಾವಿರದಿಂದ ₹3 ಸಾವಿರ ಮೊತ್ತದಲ್ಲಿ ಚಿಕಿತ್ಸೆ ಮಾಡಲಾಗುವುದು. ಸಾರ್ವಜನಿಕರು ಇಂತಹ ಸದಾವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಆರ್‌ಸಿಎಚ್ ಅಧಿಕಾರಿ ಡಾ.ಅಶ್ವಥ್, ಡಾ.ಆಶಾಲತಾ ಇತರರಿದ್ದರು.

ಏನಿದು ಆಶಾಕಿರಣ?

‘ಜನರಿಗೆ ಎದುರಾಗುವ ದಂತ ಸಮಸ್ಯೆಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ‘ಮುಗುಳ್ನಗೆಯ ಸಿಂಚನ’ ಯೋಜನೆ ರೂಪಿಸಲಾಗಿತ್ತು. ಇದೀಗ ಮತ್ತೊಂದು ವಿನೂತನ ಹಾಗೂ ಪರಿಣಾಮಕಾರಿ ಯೋಜನೆಯನ್ನು ಆರೋಗ್ಯ ಇಲಾಖೆ ರೂಪಿಸಿದೆ. ಅದರಂತೆ ದಂತ ಸಮಸ್ಯೆಗೆ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿದೆ. ಈ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಲಾಗುತ್ತಿದೆ’ ಎಂದು ಡಿಎಚ್‌ಒ ಡಾ.ಮೋಹನ್‌ ತಿಳಿಸಿದ್ದಾರೆ. 

ಹೃದಯ ವೈಶಾಲ್ಯ ಯೋಜನೆ

ಮಂಡ್ಯ ಜಿಲ್ಲೆಯಲ್ಲಿ 2023ರಲ್ಲಿ ‘ಹೃದಯ ವೈಶಾಲ್ಯ ಯೋಜನೆ’ ಆರಂಭವಾಯಿತು. ಮೊದಲ ಹಂತದಲ್ಲಿ ಆಯ್ದ 35 ಪ್ರಾಥಮಿಕ ಕೇಂದ್ರಗಳಿಗೆ ಇಸಿಜಿ ಯಂತ್ರ ವಿತರಿಸಲಾಗಿತ್ತು. ಈ ಯೋಜನೆಯಿಂದ ಕಳೆದ 1 ವರ್ಷ 6 ತಿಂಗಳಿಂದ 25000ಕ್ಕೂ ಅಧಿಕ ರೋಗಿಗಳಿಗೆ ತಪಾಸಣೆ ಮಾಡಿ ತುರ್ತಾಗಿ ಅಗತ್ಯವಿರುವವರಿಗೆ ಚಿಕಿತ್ಸೆ ನೀಡಲು ಅನುಕೂಲವಾಗಿರುತ್ತದೆ. 2ನೇ ಹಂತದಲ್ಲಿ ಉತ್ಕೃಷ್ಟ ದರ್ಜೆಯ 14 ಇಸಿಜಿ ಯಂತ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.