ಮಂಡ್ಯ: ‘ನಾನು ಅನಾಮಿಕ (ಭೀಮ), ನಾನು ಬುರುಡೆ ತೋರಿಸಲು ಬಂದಿಲ್ಲ, ಬುರುಡೆ ಬಿಡಲು ಬಂದಿದ್ದೇನೆ’ ಎಂಬರ್ಥದ ಭಿತ್ತಿಚಿತ್ರವನ್ನು ಕೊರಳಿಗೆ ಹಾಕಿಕೊಂಡು ಜರ್ಕಿನ್ ಮತ್ತು ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ಹಿಂದುತ್ವ ಪರ ಕಾರ್ಯಕರ್ತನೊಬ್ಬ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಗಮನಸೆಳೆದ.
‘ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ’ ಎನ್ನುವ ಮುಸುಕುಧಾರಿ ಅನಾಮಿಕ ಭೀಮನನ್ನು ಅಣಕಿಸುವಂತೆ ಮಂಡ್ಯದ ಮುಸುಕುಧಾರಿ ವ್ಯಕ್ತಿ ಕಾಣಿಸಿಕೊಂಡ. ಈತನ ಜೊತೆ ಬಂದಿದ್ದ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದಿದ್ದ ‘ರಕ್ತದಲ್ಲಿ ಬೆರಳಚ್ಚಿನ ಸಹಿ ಹಾಕಿದ್ದ ಪತ್ರ’ವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು.
‘ಧರ್ಮಸ್ಥಳವು ಹಿಂದೂಗಳ ನಂಬಿಕೆ, ಭಕ್ತಿಗೆ ಹೆಸರುವಾಸಿ. ಆದರೆ, ಕೆಲವರು ಧರ್ಮಸ್ಥಳ ಕ್ಷೇತ್ರದ ಪಾವಿತ್ರ‍್ಯತೆ ಹಾಳು ಮಾಡುತ್ತಿದ್ದಾರೆ. ಇದರ ಹಿಂದೆ ಕೇರಳದ ಕಮ್ಯುನಿಸ್ಟ್ ಪಕ್ಷದ ಕೈವಾಡವಿದೆ’ ಎಂದು ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ಅವರು ಆರೋಪಿಸಿದರು. ರಾಜ್ಯ ಸರಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಮೊಳಗಿಸಿದರು.
ಈ ವಿಚಾರವಾಗಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಎನ್‌ಐಎ ತನಿಖೆಗೆ ಆದೇಶ ಮಾಡಬೇಕು. ಧರ್ಮಸ್ಥಳ, ದೇಗುಲಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.