ADVERTISEMENT

ಡಯಾಲಿಸಿಸ್‌: ರೋಗಿಗಳ ಪಡಿಪಾಟಲು

ಕೇಂದ್ರದ ಸಿಬ್ಬಂದಿ ಮುಷ್ಕರ: ಸೇವೆ ಸಿಗದೇ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 13:27 IST
Last Updated 2 ಡಿಸೆಂಬರ್ 2023, 13:27 IST
ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್‌ ಕೇಮದ್ರದಲ್ಲಿ ವಾರದಲ್ಲಿ ಮೂರು ದಿನ ಡಯಾಲಿಸಿಸ್‌ ಮಾಡಿಸಿಕೊಳ್ಳುವ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಲಕ್ಷ್ಮಣರಾವ್ ಕದಂ
ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್‌ ಕೇಮದ್ರದಲ್ಲಿ ವಾರದಲ್ಲಿ ಮೂರು ದಿನ ಡಯಾಲಿಸಿಸ್‌ ಮಾಡಿಸಿಕೊಳ್ಳುವ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಲಕ್ಷ್ಮಣರಾವ್ ಕದಂ   

ಶ್ರೀರಂಗಪಟ್ಟಣ: ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ಹೂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಸಿಸ್‌ ಕೇಂದ್ರದಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುವ ರೋಗಿಗಳು ಪಡಿಪಾಟಲು ಅನುಭವಿಸುತ್ತಿದ್ದಾರೆ.

ಇಲ್ಲಿನ ಡಯಾಲಿಸಿಸ್‌ ಕೇಂದ್ರದಲ್ಲಿ ಮೂತ್ರ ಪಿಂಡ ವೈಫಲ್ಯದಿಂದ ಬಳಲು 23ಮಂದಿ ಡಯಾಲಿಸಿಸ್‌ಗೆ ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ ಕೆಲವರಿಗೆ ವಾರದಲ್ಲಿ ಮೂರು ದಿನ ಡಯಾಲಿಸಿಸ್‌ ಅಗತ್ಯ ಇದೆ. ಅಂತಹವರಿಗೆ ಇಲ್ಲಿ ಸಕಾಲಕ್ಕೆ ಡಯಾಲಿಸಿಸ್ ಸೇವೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯ ಕಾಯಂ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಡಯಾಲಿಸಿಸ್‌ ಮಾಡಲು ನಿಯೋಜಿಸಲಾಗಿದೆ. ಆದರೆ ಅವರಿಗೆ ಯಂತ್ರಗಳ ಬಳಕೆಯ ಕೌಶಲ ಅಷ್ಟಾಗಿ ಗೊತ್ತಿಲ್ಲ. ಯಂತ್ರಗಳು ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ರೋಗಿಗಳು ಸಮಸ್ಯೆ ತೋಡಿಕೊಳ್ಳುತ್ತಾರೆ.

ಮೂತ್ರಪಿಂಡ ವೈಫಲ್ಯ ಇರುವವರಿಗೆ ನಾಲ್ಕು ತಾಸು ಡಯಾಲಿಸಿಸ್‌ ಮಾಡಬೇಕು. ಆದರೆ ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಎರಡು ತಾಸು ಮಾತ್ರ ಡಯಾಲಿಸಿಸ್‌ ನಡೆಯುತ್ತಿದೆ. ಇದರಿಂದ ರೋಗಿಗಳ ಅನಾರೋಗ್ಯ ಸ್ಥಿತಿ ಉಲ್ಬಣಿಸುತ್ತಿದೆ. ಅನುಕೂಲಸ್ಥರು ದುಬಾರಿ ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ. ಬಡವರು ದಿನಗಟ್ಟಲೆ ಕಾದು ಎರಡು ಗಂಟೆಯಾದರೂ ಡಯಾಲಿಸಿಸ್‌ ಮಾಡಿಕೊಡಿ ಎಂದು ಅಂಗಲಾಚುವ ಪರಿಸ್ಥಿತಿ ಬಂದೊದಗಿದೆ.

ADVERTISEMENT

‘ಕಳೆದ ಏಳೆಂಟು ವರ್ಷಗಳಿಂದ, ವಾರದಲ್ಲಿ ಮೂರು ದಿನ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದೇನೆ. ಪಟ್ಟಣದಲ್ಲಿ ಸರಿಯಾಗಿ ಸೇವೆ ಸಿಗದ ಕಾರಣ ಹಣ ಸಾಲ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದೇನೆ. ಪಟ್ಟಣದ ಡಯಾಲಿಸಿಸ್‌ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಬಾಬುರಾಯನಕೊಪ್ಪಲು ಗ್ರಾಮದ ಲಕ್ಷ್ಮಣರಾವ್‌ ಕದಂ ದೂರಿದ್ದಾರೆ.

‘ಡಯಾಸಿಸ್‌ ಮಾಡುವ ಹೊಣೆಯನ್ನು ಸರ್ಕಾರ ಖಾಸಗಿ ಏಜೆನ್ಸಿಗೆ ವಹಿಸಿದೆ. ನಿಯೋಜಿತ ಸಿಬ್ಬಂದಿ ಮುಷ್ಕರ ಹೂಡಿರುವುದರಿಂದ ಆಸ್ಪತ್ರೆಯ ನರ್ಸ್‌ಗಳಿಂದ ಆದ್ಯತೆಯ ಮೇಲೆ ಡಯಾಲಿಸಿಸ್ ಮಾಡಿಸಲಾಗುತ್ತಿದೆ. ಯಂತ್ರಗಳು ಸರಿ ಇಲ್ಲದೇ ಇರುವುದು ಸಮಸ್ಯೆ ಆಗಿದ್ದು, ತುರ್ತು ಇರುವವರನ್ನು ಮಂಡ್ಯದ ಮಿಮ್ಸ್‌ಗೆ ಕಳುಹಿಸಿಕೊಡಲಾಗುತ್ತಿದೆ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಪಿ. ಮಾರುತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.