ADVERTISEMENT

ಶಿಳ್ಳೆಕ್ಯಾತ, ಬುಡಬುಡಿಕೆ ಕುಟಂಬಗಳಿಗೆ ಸಹಾಯ: ಕಿಟ್‌ ವಿತರಣೆ

ಶ್ರಮಿಕರ ಕಷ್ಟಕ್ಕೆ ಮಿಡಿದ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ವರ್ಗ, ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 13:09 IST
Last Updated 10 ಜೂನ್ 2021, 13:09 IST
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಂಗೇಗೌಡ ಅವರು ಶ್ರಮಿಕರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಿಸುತ್ತಿರುವುದು
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಂಗೇಗೌಡ ಅವರು ಶ್ರಮಿಕರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಿಸುತ್ತಿರುವುದು   

ಮಂಡ್ಯ: ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಶ್ರಮಿಕ ವರ್ಗಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ತನುಮನ ಧನ ಅರ್ಪಿಸಿದೆ. ಸಹಾಯ ಹಾಗೂ ಸೌಲಭ್ಯಗಳಿಂದ ವಂಚಿತರಾಗಿದ್ದ ಕಾಡಂಚಿನ ನಿವಾಸಿಗಳು, ಜೀತವಿಮುಕ್ತರು, ಶಿಳ್ಳೇಕ್ಯಾತ, ಸುಡುಗಾಡು ಸಿದ್ಧ, ಬುಡಬುಡಿಕೆ ಕುಟುಂಬಗಳನ್ನು ಹುಡುಕಿ ಆಹಾರ ಧಾನ್ಯಗಳ ಕಿಟ್‌ ವಿತರಣೆ ಮಾಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಂಗೇಗೌಡ ಅವರ ನೇತೃತ್ವದಲ್ಲಿ ಎಲ್ಲಾ ಸಿಬ್ಬಂದಿ ₹ 4 ಲಕ್ಷ ಹಣ ಸಂಗ್ರಹ ಮಾಡಿ ಆಹಾರ ಧಾನ್ಯಗಳ ಕಿಟ್‌ ವಿತರಣೆ ಮಾಡುತ್ತಿದ್ದಾರೆ.

ಸಫಾಯಿ ಕರ್ಮಚಾರಿಗಳು, ಜೀತದಿಂದ ವಿಮುಕ್ತರಾದ ನೂರು ಕುಟುಂಬಗಳನ್ನು ಹುಡುಕಿ ಈಗಾಗಲೇ ಕಿಟ್‌ ವಿತರಣೆ ಮಾಡಲಾಗಿದೆ. ಜೊತೆಗೆ ಇತರ ಸಾವಿರಕ್ಕೂ ಹೆಚ್ಚು ಶ್ರಮಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಸ್ವಂತ ಹಣದ ಜೊತೆಗೆ ಅಜೀಂ ಪ್ರೇಮ್‌ ಜಿ, ಇಸ್ಕಾನ್‌ ಫೌಂಡೇಷನ್‌ನಿಂದ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ವಿತರಣೆ ಮಾಡಲಾಗುತ್ತಿದೆ.

ADVERTISEMENT

ಪ್ರತಿದಿನ ಒಂದೊಂದು ತಾಲ್ಲೂಕಿಗೆ ತೆರಳುವ ಉಪ ನಿರ್ದೇಶಕ ರಂಗೇಗೌಡ ಅವರು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕಿಟ್‌ ವಿತರಿಸುತ್ತಿದ್ದಾರೆ. ಮಳವಳ್ಳಿ ತಾಲ್ಲೂಕಿನ ಕಾಡಂಜಿನಲ್ಲಿ ವಾಸಿಸುವ ಕುಟುಂಬ ಸದಸ್ಯರು, ನಾಗಮಂಗಲ ತಾಲ್ಲೂಕಿನ ಬುಡಬುಡಕೆ ಕಾಲೊನಿಯಲ್ಲಿ ವಾಸಿಸುವ 30 ಕುಟುಂಬ, ಶಿಳ್ಳೇಕ್ಯಾತ ಸಮುದಾಯದ ಜನರು, ಕದಬಹಳ್ಳಿಯ ಕೊರಮರು, ಕೋಡಿಹಳ್ಳಿ ಗ್ರಾಮದ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಸಹಾಯ ಮಾಡಲಾಗಿದೆ.

ಕೇವಲ ಆಹಾರ ಧಾನ್ಯಗಳಷ್ಟೇ ಅಲ್ಲದೇ ಮಾಸ್ಕ್‌, ಸ್ಯಾನಿಟೈಸರ್‌, ಸೋಪು, ಬ್ರಷ್‌ ಮುಂತಾದ ಸುರಕ್ಷತಾ ಕಿಟ್‌ಗಳನ್ನೂ ವಿತರಣೆ ಮಾಡಲಾಗಿದೆ. ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು, ಅಂತರ ಕಾಪಾಡಿಕೊಳ್ಳಬೇಕು ಎಂದು ಜಾಗೃತಿಯನ್ನೂ ಮೂಡಿಸಲಾಗಿದೆ.

‘ಲಾಕ್‌ಡೌನ್‌ ಸಂಕಷ್ಟದಲ್ಲಿ ಶ್ರಮಿಕರ ಕೈಗೆ ಕೆಲಸ ದೊರೆಯುತ್ತಿಲ್ಲ. ಹಲವು ಸಂಘ ಸಂಸ್ಥೆಗಳು ಬಡವರಿಗೆ ಸಹಾಯ ಮಾಡುತ್ತಿವೆ. ಆದರೆ ಸೌಲಭ್ಯಗಳು ಅಗತ್ಯವಾಗಿ ತಲುಪಬೇಕಾಗಿದ್ದ ಬಡಕುಟುಂಬಗಳಿಗೆ ತಲುಪುತ್ತಿಲ್ಲ. ಇದನ್ನು ಗಮನಿಸಿ ಸಹಾಯದಿಂದ ವಂಚಿತರಾದವರನ್ನು ಹುಡುಕಿ ಕಿಟ್‌ ವಿತರಣೆ ಮಾಡಲಾಗುತ್ತಿದೆ. ಇದಕ್ಕೆ ನಮ್ಮ ಇಲಾಖೆಯ ಸಿಬ್ಬಂದಿ ಹಾಗೂ ಸಂಸ ಸಂಸ್ಥೆಗಳಿಗೆ ಅನಭಿನಂದಿಸುತ್ತೇನೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಂಗೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.