ADVERTISEMENT

ಡಿಕೆಶಿ ಸಿಎಂ ಸ್ಥಾನ ಬಯಸುವುದು ತಪ್ಪಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:54 IST
Last Updated 22 ನವೆಂಬರ್ 2025, 4:54 IST
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ– ವಡಿಯಾಂಡಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ– ವಡಿಯಾಂಡಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು   

ಶ್ರೀರಂಗಪಟ್ಟಣ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಸ್ಥಾನ ಬಯಸುವುದು ತಪ್ಪಲ್ಲ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ತಾಲ್ಲೂಕಿನ ಅರಕೆರೆ ಇತರೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಪಕ್ಷದ ಹಿರಿಯ ನಾಯಕರೂ ಹೌದು. ಪಕ್ಷವನ್ನ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಅವರ ಜತೆಗೂಡಿ ಡಿ.ಕೆ. ಶಿವಕುಮಾರ್‌ ಕೂಡ ಶ್ರಮಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಆಗಬೇಕು ಎಂದು ಅವರು ಅಪೇಕ್ಷೆ ವ್ಯಕ್ತಪಡಿಸುವುದು ಸಹಜ. ಆದರೆ ಯಾರಿಗೆ ಯಾವಾಗ ಯಾವ ಸ್ಥಾನ ಕೊಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್‌ ತೀರ್ಮಾನಿಸುತ್ತದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ADVERTISEMENT

‘ನನಗೂ ಸಚಿವನಾಗಬೇಕು ಎಂಬ ಆಸೆ ಇದೆ. ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ನಮ್ಮ ಕುಟುಂಬ 50 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ನನಗೂ ಸಚಿವ ಸ್ಥಾನದ ಆಸೆ ಇದೆ. ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಹೇಳಿದರು.

‘₹5 ಕೋಟಿ ವೆಚ್ಚದಲ್ಲಿ ಅರಕೆರೆ– ವಡಿಯಾಂಡಹಳ್ಳಿ ಸಂಪರ್ಕ ರಸ್ತೆ, ₹2 ಕೋಟಿ ವೆಚ್ಚದಲ್ಲಿ, ಶಾಂತಿಕೊಪ್ಪಲು– ಉರಮಾರಕಸಲಗೆರೆ ಸಂಪರ್ಕ ರಸ್ತೆ, ಮಹದೇವಪುರದಲ್ಲಿ ₹1.5 ಕೋಟಿ ವೆಚ್ಚದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಮತ್ತು ರಸ್ತೆಗಳು, ತರೀಪುರ, ಹಂಪಾಪುರ, ಹುರಳಿಕ್ಯಾತನಹಳ್ಳಿ, ಮೇಳಾಪುರದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬಾಲ ಭವನಕ್ಕೆ ಸ್ಮಾರ್ಟ್‌ ಟಿವಿ ವಿತರಿಸಲಾಗುತ್ತಿದೆ. ಇಂಡುವಾಳು ಮತ್ತು ಬಲ್ಲೇನಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೂ ಶುಕ್ರವಾರ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಸಿದ ರಮೇಶ ಬಂಡಿಸಿದ್ದೇಗೌಡ, ‘ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಇತರ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಯಾವ ಪ್ರಮಾಣದ ಅನುದಾನ ನೀಡಿದ್ದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

ಅರಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂತೋಷ್, ಎಂಪಿಸಿಎಸ್‌ ಅಧ್ಯಕ್ಷ ವಿ.ಸಿ. ಮಹೇಶ್, ಮುಖಂಡರಾದ ಎ.ಆರ್‌. ಶಶಾಂಕ್, ಉದಯಕುಮಾರ್‌, ವಿ.ಇ. ನಾಗರಾಜು, ಹಂಗರಹಳ್ಳಿ ಗೋವಿಂದೇಗೌಡ, ದಿವಾಕರ್‌, ಎ. ಸೋಮಶೇಖರ್‌, ಟಿಎಪಿಸಿಎಂಎಸ್‌ ನಿರ್ದೇಶಕ ಶಿವಯ್ಯ ಇದ್ದರು.

ಮಹದೇವಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಬಸವರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಾಳೇಗೌಡ, ಅಬ್ದುಲ್‌ ಸುಕ್ಕೂರ್‌, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್‌, ಜಗದೀಶ್, ಗೊಬ್ಬರಗಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೇಶ್, ಪ್ರಜ್ವಲ್‌, ಜಿ.ಪಿ. ಸತೀಶ್, ಹುರಳಿ ಕ್ಯಾತನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್‌, ಶಿವಮಲ್ಲು, ಮೇಳಾಪುರದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸನಂದಮ್ಮ, ಲಕ್ಷ್ಮಣ, ಕರಿಯಪ್ಪ, ಪಿಡಿಒ ತಿಲಕ್‌ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.