ADVERTISEMENT

ಶ್ರೀರಂಗಪಟ್ಟಣ: ತಾರತಮ್ಯ ಮಾಡುವ ಸಿಎಂ ಬೇಕಾ– ‘ಮುಖ್ಯಮಂತ್ರಿ’ ಚಂದ್ರು ಪ್ರಶ್ನೆ

ಎಎಪಿ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:54 IST
Last Updated 10 ಆಗಸ್ಟ್ 2022, 4:54 IST
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿದರು. ಪ್ರೊ.ಪಿ.ವಿ. ನಂಜರಾಜ ಅರಸ್‌, ಪೃಥ್ವಿರೆಡ್ಡಿ, ಸಿ.ಎಸ್‌. ವೆಂಕಟೇಶ್‌ ಇದ್ದಾರೆ
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿದರು. ಪ್ರೊ.ಪಿ.ವಿ. ನಂಜರಾಜ ಅರಸ್‌, ಪೃಥ್ವಿರೆಡ್ಡಿ, ಸಿ.ಎಸ್‌. ವೆಂಕಟೇಶ್‌ ಇದ್ದಾರೆ   

ಶ್ರೀರಂಗಪಟ್ಟಣ: ‘ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಧರ್ಮ, ಜಾತಿಯ ಕಾರಣಕ್ಕೆ ಜನರನ್ನು ಹಳದಿ ಕಣ್ಣಿನಿಂದ ನೋಡಬಾರದು. ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಆಡಳಿತ ನಡೆಸಬೇಕು’ ಎಂದು ಎಎಪಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಸಲಹೆ ನೀಡಿದರು.

ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಹಿಂದೂ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಕೊಟ್ಟ ಮುಖ್ಯಮಂತ್ರಿ, ಮುಸ್ಲಿಂ ಕುಟುಂಬಗಳನ್ನು ನಿರ್ಲಕ್ಷಿಸಿರುವುದು ಯಾರೂ ಒಪ್ಪುವಂತಹದ್ದಲ್ಲ. ಧರ್ಮದ ಕಾರಣಕ್ಕೆ ತಾರತಮ್ಯ ಮಾಡುವ ಬಸವರಾಜ ಬೊಮ್ಮಾಯಿ ಅವರಂತಹ ಮುಖ್ಯಮಂತ್ರಿ ನಮಗೆ ಬೇಕಾ’ ಎಂದು ಪ್ರಶ್ನಿಸಿದರು.

ADVERTISEMENT

‘ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಭಾರತವನ್ನು ಬಿಟ್ಟು ತೊಲಗಿ ಎಂದು ಬ್ರಿಟಿಷರಿಗೆ ಹೇಳಿದ ರೀತಿಯಲ್ಲಿಯೇ ಅಧಿಕಾರ ಬಿಟ್ಟು ತೊಲಗಿ ಎಂದು ಬಿಜೆಪಿಯವರಿಗೆ ಹೇಳಬೇಕಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಅಧಿಕಾರ ಕೊಡಬೇಡಿ ಎಂದು ಜನರಿಗೆ ತಿಳಿಸಬೇಕಿದೆ. ಲೂಟಿ ಹೊಡೆಯು ವುದನ್ನೇ ಕಾಯಕ ಮಾಡಿಕೊಂಡಿರುವ ಈ ಮೂರೂ ಪಕ್ಷಗಳನ್ನು ಜನರು ತಿರಸ್ಕರಿಸಬೇಕು’ ಎಂದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ ಮಾತನಾಡಿ, ‘ದೆಹಲಿ ಮತ್ತು ಪಂಜಾಬ್‌ಗಳಲ್ಲಿ ಎಎಪಿ ಜನ ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರ ರಹಿತ ವ್ಯವಸ್ಥೆ ಬೇಕಾದರೆ ರಾಜ್ಯದ ಜನರು ಎಎಪಿಯನ್ನು ಅಧಿಕಾರಕ್ಕೆ ತರಬೇಕು. ಅರವಿಂದ ಕೇಜ್ರಿವಾಲ್‌ ಸರ್ಕಾರದ ಸಾಧನೆಗಳನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಬೇಕು’ ಎಂದು ಹೇಳಿದರು.

ಇತಿಹಾಸ ಸಂಶೋಧಕ ಪ್ರೊ.ಪಿ.ವಿ. ನಂಜರಾಜ ಅರಸ್‌, ಎಎಪಿ ಮುಖಂಡ ಸಿ.ಎಸ್‌. ವೆಂಕಟೇಶ್‌ ಮಾತನಾಡಿದರು.

ವಿವಿಧ ಪಕ್ಷಗಳ ಕಾರ್ಯಕರ್ತರು ಎಎಪಿ ಸೇರಿದರು.

ಎಎಪಿ ಜಿಲ್ಲಾ ಉಸ್ತುವಾರಿ ದರ್ಶನ್‌ ಜೈನ್‌, ಸಹ ಪ್ರಭಾರಿ ಅಬ್ದುಲ್‌, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಅಮ್ರೀನ್‌ ತಾಜ್‌, ಯುವ ಘಟಕದ ಜಿಲ್ಲಾ ಅಧ್ಯಕ್ಷ ಕೆ.ಎಸ್‌. ಜಯಶಂಕರ್‌, ಚಿಕ್ಕತಮ್ಮೇಗೌಡ, ಪಾಂಡವಪುರ ಘಟಕದ ಅಧ್ಯಕ್ಷ ವಿಜೇಂದ್ರು, ಮಳವಳ್ಳಿ ಘಟಕದ ಅಧ್ಯಕ್ಷ ಚಿಕ್ಕಣ್ಣ, ಮದ್ದೂರು ಘಟಕದ ಅಧ್ಯಕ್ಷ ಶಿವರಾಂ, ಪುಷ್ಪಾ, ಮಂಜೇಶ್‌ಗೌಡ, ಕುಬೇರಪ್ಪ, ಕಲ್ಪನಾ, ತಮ್ಮಯ್ಯ, ಮಹದೇವಸ್ವಾಮಿ, ಕೆ.ಸಿ. ಮಾದೇಶ್‌, ಸದಾನಂದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.