ADVERTISEMENT

ಕಡಿಮೆ ವೆಚ್ಚದಲ್ಲಿ ಅಂತರಿಕ್ಷ ಯಾನ: ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 21:08 IST
Last Updated 20 ಫೆಬ್ರುವರಿ 2024, 21:08 IST
<div class="paragraphs"><p>ನಾಗಮಂಗಲದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪಟ್ಟಾಭಿಷೇಕದ 11ನೇ ವಾರ್ಷಿಕೋತ್ಸವ ಹಾಗೂ ಜ್ಞಾನ– ವಿಜ್ಞಾನ– ತಂತ್ರಜ್ಞಾನ ಸಮ್ಮೇಳನದ ಅಂಗವಾಗಿ ಮಂಗಳವಾರ ಮಠದಲ್ಲಿ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ </p></div>

ನಾಗಮಂಗಲದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪಟ್ಟಾಭಿಷೇಕದ 11ನೇ ವಾರ್ಷಿಕೋತ್ಸವ ಹಾಗೂ ಜ್ಞಾನ– ವಿಜ್ಞಾನ– ತಂತ್ರಜ್ಞಾನ ಸಮ್ಮೇಳನದ ಅಂಗವಾಗಿ ಮಂಗಳವಾರ ಮಠದಲ್ಲಿ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌

   

ನಾಗಮಂಗಲ (ಮಂಡ್ಯ ಜಿಲ್ಲೆ): ‘ಅತ್ಯಂತ ಕಡಿಮೆ ವೆಚ್ಚದಲ್ಲಿ ಅಂತರಿಕ್ಷ ಯಾನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಉದ್ದೇಶ. ಈ ನಿಟ್ಟಿನಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪಟ್ಟಾಭಿಷೇಕದ 11ನೇ ವಾರ್ಷಿಕೋತ್ಸವ ಹಾಗೂ ಜ್ಞಾನ– ವಿಜ್ಞಾನ– ತಂತ್ರಜ್ಞಾನ ಮೇಳದ ಅಂಗವಾಗಿ ಮಂಗಳವಾರ ಬಿಜಿಎಸ್ ಸಭಾಂಗಣದಲ್ಲಿ ‘ವಿಜ್ಞಾತಂ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ADVERTISEMENT

‘ಜನರ ತೆರಿಗೆ ಹಣದಿಂದ ಬಾಹ್ಯಾಕಾಶ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ವಿಜ್ಞಾನಿಗಳು ಬುದ್ಧಿವಂತಿಕೆಯಿಂದ, ಜಾಗರೂಕತೆಯಿಂದ ಕಡಿಮೆ ವೆಚ್ಚದಲ್ಲಿ ಚಂದ್ರಯಾನವನ್ನು ಯಶಸ್ವಿಗೊಳಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ವ್ಯಕ್ತಿಯ ಪ್ರತಿನಿತ್ಯದ ಚಟುವಟಿಕೆಯ ಭಾಗವಾಗಬೇಕು, ಸಂಶೋಧನೆಗಳು ನಿರಂತರವಾಗಬೇಕು’ ಎಂದರು.

‘ಕೃತಕ ಉಪಗ್ರಹಗಳನ್ನು ತಯಾರಿಸಿ ಉಡಾವಣೆ ಮಾಡುವುದು ಸವಾಲಿನ ಸಂಗತಿ. ಚಂದ್ರನ ದಕ್ಷಿಣದ ತುದಿಗೆ ಉಪಗ್ರಹ ಉಡಾವಣೆ ಮಾಡಿದ ಮೊದಲ ದೇಶವಾಗಿ ಭಾರತ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ಇಂದು ದೇಶವು 50ಕ್ಕೂ ಅಧಿಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸಿದ್ದು, ಹವಾಮಾನ, ರಕ್ಷಣೆ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕಾರ್ಯಗಳಿಗೆ ಉಪಯೋಗವಾಗುತ್ತಿದೆ’ ಎಂದರು.

ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ‘ಧರ್ಮ ಮತ್ತು ವಿಜ್ಞಾನ ಸಮ್ಮಿಲನವಾದಾಗ ಬದುಕು ಸುಂದರವಾಗುತ್ತದೆ. ಇವೆರಡೂ ಪರಸ್ಪರ ಬೆಸೆದುಕೊಂಡಿದ್ದು, ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದನ್ನು ವಿಜ್ಞಾನಿಗಳೂ ಹೇಳುತ್ತಾರೆ’ ಎಂದರು.

ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಗುಜರಾತಿನ ಆರ್ಶ್ ವಿದ್ಯಾಮಂದಿರ ಅಧ್ಯಕ್ಷ ಸ್ವಾಮಿ ಪರಮಾತ್ಮಾನಂದ ಸರಸ್ವತಿ, ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದರು.

ನಿರ್ಮಲಾನಂದನಾಥ ಸ್ವಾಮೀಜಿಯೊಂದಿಗೆ ವಸ್ತುಪ್ರರ್ದಶನಕ್ಕೆ ಭೇಟಿ ನೀಡಿದ ಎಸ್‌.ಸೋಮನಾಥ್‌ ಅವರು ಚಂದ್ರಯಾನ ಮಾದರಿ ವೀಕ್ಷಿಸಿದರು.

ಪಟ್ಟಾಭಿಷೇಕ ವಾರ್ಷಿಕೋತ್ಸವ ವೈಭವ

ನಿರ್ಮಲಾನಂದನಾಥ ಸ್ವಾಮೀಜಿಯ ಪಟ್ಟಾಭಿಷೇಕದ 11ನೇ ವಾರ್ಷಿಕೋತ್ಸವ ವೈಭವಯುತವಾಗಿ ನಡೆಯಿತು. ಬೆಳಿಗ್ಗೆಯಿಂದಲೂ ಆದಿಚುಂಚನಗಿರಿ ಮಠದ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸ್ವಾಮೀಜಿಯನ್ನು ಸಿಂಹಾಸನದಲ್ಲಿ ಕೂರಿಸಿ ಕಿರೀಟ ಆಭರಣದ ತೊಡಿಸಿ ಪಟ್ಟಾಭಿಷೇಕದ ವಿಧಿವಿಧಾನ ನೆರವೇರಿಸಲಾಯಿತು. ಶ್ರೀಗಳ ಮೇಲೆ ಬಗೆಬಗೆಯ ಹೂವಿನ ಮಳೆಗರೆಯಲಾಯಿತು. ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಆದಿಶಕ್ತಿ ಭವನದಲ್ಲಿ ಜ್ಞಾನ– ವಿಜ್ಞಾನ– ತಂತ್ರಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ವಸ್ತುಪ್ರದರ್ಶನ ಮಳಿಗೆಗಳಿಗೆ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಭೇಟಿ ನೀಡಿ ಮಾದರಿಗಳನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.