
ಮಳವಳ್ಳಿ: ₹400 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಸರ್.ಎಂ.ವಿ.ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯ ಉಪನಾಲೆ, ಸೀಳು ನಾಲೆಗಳ ನಾಲಾ ಆಧುನೀಕರಣದ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚಿಕ್ಕಮೂಲಗೂಡು ಗ್ರಾಮದ ಕೆರೆ ಬಳಿ ಭಾನುವಾರ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ನಾಲಾ ಬಯಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ₹400 ಕೋಟಿ ವೆಚ್ಚದಲ್ಲಿ ಉಪನಾಲೆ ಮತ್ತು ಸೀಳು ನಾಲೆಗಳ ಆಧುನೀಕರಣದ ಜೊತೆಗೆ ಜಮೀನಿಗೆ ಹೋಗುವ ರಸ್ತೆಗಳ ಸಂಪೂರ್ಣವಾಗಿ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ಕನ್ನಂಬಾಡಿ ನಿರ್ಮಾಣವಾದ ನಂತರ ನೀರಾವರಿ ವಿಚಾರದ ಸಮಸ್ಯೆಗಳ ಬಗೆಹರಿಸುವಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ’ ಎಂದರು.
ಇನ್ನೂ ಕೆಲವೇ ದಿನಗಳಲ್ಲಿ ಸರ್ಕಾರದಿಂದ ವಿಶೇಷ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರದೇಶದ ರಸ್ತೆಗಳ ಪ್ರಗತಿಗೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸುಮಾರು ₹600 ಕೋಟಿ ಅನುದಾನದ ವಿವಿಧ ಕಾಮಗಾರಿಗಳಿಗೆ ಶ್ರೀಘ್ರ ಶಂಕುಸ್ಥಾಪನೆ ನಡೆಸಲಾಗುತ್ತದೆ ಎಂದರು.
ತಾಲ್ಲೂಕಿನ ಸುಜ್ಜಲ್ಲೂರು ಗ್ರಾಮದಲ್ಲಿ ಸಿಎಸ್ಆರ್ ಅನುದಾನದಲ್ಲಿ ನವೀಕರಣಗೊಂಡ ಶಾಲಾ ಕಟ್ಟಡ, ಅಡುಗೆ ಕೋಣೆ, ಮತ್ತು ಗಣಕಯಂತ್ರದ ಕೊಠಡಿಗಳನ್ನು ಉದ್ಘಾಟಿಸಿದರು. ನಂತರ ಬೆಂಡರವಾಡಿ ಗ್ರಾಮದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣ ಹಾಗೂ ಮಿಕ್ಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಭಾನುವಾರ ₹9.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮನ್ ಮುಲ್ ನಿರ್ದೇಶಕರಾದ ಡಿ.ಕೃಷ್ಣೇಗೌಡ, ಆರ್.ಎನ್.ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು, ಕೆಪಿಸಿಸಿ ಸದಸ್ಯ ಸಿದ್ದೇಗೌಡ, ಮುಖಂಡರಾದ ಸಿ.ಮಾಧು, ಮಹೇಶ್, ಮೊಳ್ಳೇಗೌಡ, ಕಂದೇಗಾಲ ಶ್ರೀನಿವಾಸ್, ರಾಜಣ್ಣ, ಹನುಮಂತಯ್ಯ, ಶಿವಮೂರ್ತಿ, ಮಹದೇವಸ್ವಾಮಿ, ಮಧು, ಶಿವಕುಮಾರ್, ಮಂಜು, ರಾಮಲಿಂಗಣ್ಣ, ದೊಡ್ಡಣ್ಣ, ರುದ್ರ, ಶಿವಕುಮಾರ್, ರಾಮಚಂದ್ರು, ಮುತ್ತುರಾಜ್, ನಾಗರಾಜು, ಸತೀಶ್, ಜಯರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.