ನಾಗಮಂಗಲ: ‘ನಿರುದ್ಯೋಗಿ ಯುವ ಜನರಿಗೆ ವಾಹನ ಚಾಲನೆ ತರಬೇತಿ ನೀಡಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವಾಹನ ಚಾಲನಾ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಬೆಳ್ಳೂರಿನಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ತರಬೇತಿ ಕೇಂದ್ರ ಪ್ರಾರಂಭಿಸಲು 9.5 ಎಕರೆ ಸ್ಥಳವನ್ನು ಪ್ರಾದೇಶಿಕ ಸಾರಿಗೆ ಇಲಾಖೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.
₹1 ಕೋಟಿ ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ, ₹55 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಲಾಗಿದೆ. ₹5 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್ ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದೇ ರೀತಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಬೆಳ್ಳೂರಿಗೆ ನೀಡಲಾಗುತ್ತಿದೆ. ಸಾರ್ವಜನಿಕರು ಸಹ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕೆಲಸ ನಡೆಸಲು ಸಮಯಾವಕಾಶ ನೀಡುವುದರೊಂದಿಗೆ ಸಹಕರಿಸಬೇಕು ಎಂದರು.
ಪಟ್ಟಣ ಪಂಚಾಯಿತಿಯ ವ್ಯಾಪ್ತಿ ಹೆಚ್ಚಳವಾಗುತ್ತಿದ್ದು, ₹70 ಕೋಟಿ ವೆಚ್ಚದಲ್ಲಿ ಒಳ ಚರಂಡಿ ಕೆಲಸಗಳು ಹಾಗೂ ಸುತ್ತ ಮುತ್ತಲಿನ ರಸ್ತೆಯನ್ನು ₹7 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಬೆಳ್ಳೂರಿನಲ್ಲಿ ಪಟ್ಟಣ ಪಂಚಾಯಿತಿ ಹೊಸ ಕಟ್ಟಡ, ಬಸ್ ನಿಲ್ದಾಣ, ನಾಡ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದ ಅವರು ಬಸ್ ನಿಲ್ದಾಣಕ್ಕೆ ಮಂಜೂರು ಮಾಡಲಾಗಿರುವ 1 ಎಕರೆ 30 ಗುಂಟೆ ಸ್ಥಳವನ್ನು ಹಸ್ತಾಂತರ ಮಾಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಆದರ್ಶ, ಬೆಳ್ಳೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಮೂಡಲಪ್ಪ, ದಿನೇಶ್, ಸುರೇಶ್, ರಾಜೇಶ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
ಭೂ ಸುರಕ್ಷಾ ಯೋಜನೆಗೆ ಚಾಲನೆ
ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಪುರಾತನ ಕಾಲದಿಂದಿರುವ ಆಸ್ತಿ ಪತ್ರಗಳು ಹಾಗೂ ಇನ್ನಿತರೆ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದ ಯಾವುದೇ ದಾಖಲೆಗಳನ್ನು ಮುಂದೆ ಕಳೆದು ಹೋಗುವುದು ತಿದ್ದುವುದು ತಪ್ಪುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ₹ 31 ಕೋಟಿ ವಚ್ಚದಲ್ಲಿ ಬೆಳ್ಳೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವಿತರಣಾ ಜಾಲ ವ್ಯವಸ್ಥೆಯನ್ನು ಒದಗಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರಿಂದ ಹೆಚ್ಚುವರಿ ಟ್ಯಾಂಕ್ ಹಾಗೂ ಮನೆ- ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಒದಗಿಸಲಾಗುವುದು ಎಂದರು.
‘ಕುಂದುಕೊರತೆ ದಾಖಲಿಸಲು ಪುಸ್ತಕವಿಡಿ’
ಸಾರ್ವಜನಿಕರು ಕುಂದು ಕೊರತೆ ದಾಖಲಿಸಲು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ತಹಶೀಲ್ದಾರ್ ಕಚೇರಿಗಳಲ್ಲಿ ಪುಸ್ತಕ ಇಡಬೇಕು. ನೋಡಲ್ ಅಧಿಕಾರಿ ನೇಮಕ ಮಾಡಿ ಪ್ರತಿವಾರ ಪುಸ್ತಕ ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆ ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಿ ಪರಿಹರಿಸಬೇಕು ಎಂದು ಸಚಿವರು ಸೂಚಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ತಾಲ್ಲೂಕಿಗೆ ಒಂದು ವರ್ಷಕ್ಕೆ ₹220 ಕೋಟಿ ನೇರವಾಗಿ ಒದಗಿಸಲಾಗುವುದು. ಇದರೊಂದಿಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.