ADVERTISEMENT

ದುಮ್ಮಸಂದ್ರ ಅಣೆಕಟ್ಟು, ಅಡವೀಕಟ್ಟೆ ಜಲಪಾತ ಸೊಗಸಾದ ದರ್ಶನ

ಧುಮ್ಮಿಕ್ಕುತ್ತಿರುವ ಹಾಲ್ನೊರೆಯಂತರ ನೀರು, ಬರದ ನಾಡಿನಲ್ಲಿ ಮಳೆ ನೀರಿನ ಸೊಗಸಾದ ದರ್ಶನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 14:29 IST
Last Updated 23 ಅಕ್ಟೋಬರ್ 2021, 14:29 IST
ಅಡವವೀಕಟ್ಟೆ ಜಲಪಾತದ ಸುಂದರ ನೊಟ
ಅಡವವೀಕಟ್ಟೆ ಜಲಪಾತದ ಸುಂದರ ನೊಟ   

ನಾಗಮಂಗಲ: ಜಿಲ್ಲೆಯಲ್ಲಿ ಬರಪೀಡಿತ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿರುವ ತಾಲ್ಲೂಕಿನಲ್ಲಿ ಕಳೆದ‌ ಮೂರು ನಾಲ್ಕು ವರ್ಷಗಳಿಂದ ಉತ್ತಮ ಮಳೆಯಾಗಿದ್ದು ಹೇಮಾವತಿ ಜಲಾಶಯದಿಂದ ಕೆರೆಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲ್ಲೂಕಿನ ದುಮ್ಮಸಂದ್ರ ಅಣೆಕಟ್ಟು, ಅಡವೀಕಟ್ಟೆ ಜಲಪಾತ ತುಂಬಿ ಹರಿಯುತ್ತಿದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

ಪ್ರತಿ ಬೇಸಿಗೆಯಲ್ಲೂ ಬಹುತೇಕ ಕೆರೆಕಟ್ಟೆಗಳು ಬತ್ತಿಹೋಗುವ ಮೂಲಕ ಬರದ ಸನ್ನಿವೇಶ ನಿರ್ಮಾಣವಾದರೆ, ಅದೇ ಮಳೆಗಾಲ ಬಂತೆಂದರೆ ಕೆರೆಕಟ್ಟೆಗಳು ಪ್ರಮುಖ ಪ್ರವಾಸಿ ತಾಣಗಳಾಗಿ ಬದಲಾಗುತ್ತವೆ. ದುಮ್ಮಸಂದ್ರ ಅಣೆಕಟ್ಟು ಮತ್ತು ಅಡವೀಕಟ್ಟೆ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾದಂತೆ ಸೊಬಗು ಹೆಚ್ಚಿಸಿಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ತಾಲ್ಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ದುಮ್ಮಸಂದ್ರ ಗ್ರಾಮದ ಪಕ್ಕದಲ್ಲಿ ತಾಲ್ಲೂಕಿನ ಜೀವನಾಡಿಯಾಗಿರುವ ವೀರವೈಷ್ಣವಿ ನದಿಗೆ ಅಡ್ಡಲಾಗಿ 150 ಅಡಿ ಉದ್ದ, 20 ಅಡಿ ಎತ್ತರವಾದ ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ. ನೀರಿನ ಪ್ರಮಾಣ ಹೆಚ್ಚಾದಂತೆ ಭೋರ್ಗರೆತದೊಂದಿಗೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಾಲ್ನೊರೆಯಂತಹ ಹರಿಯುವುದು ಕಣ್ಮನ ಸೆಳೆಯುತ್ತದೆ. ಪ್ರತಿನಿತ್ಯ ಸಾವಿರಾರು ಜನರು ಮೋಜುಮಸ್ತಿಯಲ್ಲಿ ತೊಡಗುತ್ತಾ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.

ADVERTISEMENT

ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಅಡವೀಕಟ್ಟೆಯು ಬೇಸಿಗೆಯಲ್ಲಿ ಇಲ್ಲೊಂದು ಜಲಪಾವಿದೆ ಎಂಬ ಕುರುಹು ಸಹ ಇರುವುದಿಲ್ಲ. ಆದರೆ ಮಳೆಗಾಲದಲ್ಲಿ ಮಾತ್ರ ಸುಮಾರು 30 ಅಡಿಗೂ ಎತ್ತರದ ಬಂಡೆಗಳ ಮೇಲಿಂದ ಬಿಳಿ ಹಾಲ್ನೊರೆಯಂತಹ ನೀರು ಹರಿಯುವುದನ್ನು ನೋಡುವುದೇ ಒಂದು ಸೊಬಗು. ಇಲ್ಲಿಗೆ ಮಳೆಗಾಲದಲ್ಲಿ ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲದೇ ಜಲಪಾತದ ಮುಂದೆಯೇ ಇರುವ ಹೊಂಡದಲ್ಲಿ ಈಜುವುದು ಮತ್ತು ಸ್ನಾನ ಮಾಡಿ ಸಮಯ ಕಳೆಯುತ್ತಾರೆ.

ರಸ್ತೆ, ಮಾರ್ಗಸೂಚಿ ಇಲ್ಲ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣವಾಗಿರುವ ದುಮ್ಮಸಂದ್ರ ಗ್ರಾಮಕ್ಕೆ ಕಳೆದ ಕೆಲವು ದಶಕಗಳಿಂದಲೂ ಅಗತ್ಯ ಮೂಲ ಸೌಕರ್ಯಗಳಿಲ್ಲದೇ ಅಷ್ಷಾಗಿ ಅಭಿವೃದ್ಧಿ ಕಂಡಿಲ್ಲ. ಅಣೆಕಟ್ಟೆಗೆ ಹೋಗಲು ಸರಿಯಾದ ರಸ್ತೆಯಿಲ್ಲದೇ ಪ್ರವಾಸಿಗರು ಪರದಾಡುವಂತಾಗಿದೆ. ಜೊತೆಗೆ ಅಡವೀಕಟ್ಟೆಯೂ ಸಹ ಒಂದು ಪ್ರಮುಖ ಪ್ರವಾಸಿ ತಾಣವಾಗಿದ್ದು, ಸ್ಥಳೀಯ ಗ್ರಾ.ಪಂ ಸೇರಿದಂತೆ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಅಡವೀಕಟ್ಟೆ ಜಲಪಾತದ ಬಗ್ಗೆ ತಿಳಿಯುವುದೇ ಇಲ್ಲ. ಈ ಸ್ಥಳಕ್ಕೆ ಸಂಬಂಧಪಟ್ಟ ಯಾವುದೇ ಗುರುತುಗಳಾಗಲೀ, ಮಾರ್ಗಸೂಚಿಗಳನ್ನಾಗಲೀ ಗುರುತು ಮಾಡುವ ಕೆಲಸಗಳು ಇದುವರೆಗೂ ಆಗಿಲ್ಲ.

‘ಇತ್ತೀಚಿನ ದಿನಗಳಲ್ಲಿ ದುಮ್ಮಸಂದ್ರ ಅಣೆಕಟ್ಟೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆದಿದ್ದು, ಪ್ರತಿ ನಿತ್ಯ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಜನರು ಬರುತ್ತಿದ್ದು, ಕಾವೇರಿ ನೀರಾವರಿ ನಿಗಮ ಮನಸ್ಸು ಮಾಡಿದರೆ ಅಣೆಕಟ್ಟೆಗೆ ಒಂದು ಉತ್ತಮ ಪಾದಾಚಾರಿ ಮಾರ್ಗ ಮತ್ತು ರಸ್ತೆ ನಿರ್ಮಾಣ ಮಾಡುವ ಜೊತೆಗೆ ದೋಣಿವಿಹಾರ ಸೇರಿದಂತೆ ಹಲವು ಬಗೆಯ ಜಲಕ್ರೀಡೆಗಳನ್ನು ವ್ಯವಸ್ಥೆ ಮಾಡಬಹುದು’ ಎಂದು ಗ್ರಾಮದ ಡಿ.ಜಿ.ಗೌಡ ಹೇಳುತ್ತಾರೆ.

*******

ಸ್ಥಳಗಳಿಗೆ ಹೋಗುವುದು ಹೇಗೆ?

ದುಮ್ಮಸಂದ್ರ ಅಣೆಕಟ್ಟೆಗೆ ತಾಲ್ಲೂಕು ಕೇಂದ್ರದಿಂದ ಎರಡು ಮಾರ್ಗಗಳಿದ್ದು, ಬಹುತೇಕ ಎರಡು ಮಾರ್ಗಗಳೂ ಸಮಾನ ಅಂತರ ಹೊಂದಿವೆ. ಒಂದು ಮಾರ್ಗ ಚಾಮರಾಜನಗರ- ಜೇವರ್ಗಿ ಹೆದ್ದಾರಿಯಲ್ಲಿ ಸಾಗಿ ದೊಡ್ಡಜಟಕ ಗ್ರಾಮದ ಮೂಲಕ ತಲುಪಬೇಕು. ಮತ್ತೊಂದು ಮಾರ್ಗ ಪಟ್ಟಣದ ಮೈಲಾರ ಪಟ್ಟಣ ರಸ್ತೆಯಲ್ಲಿ ಸಾಗಿ ಕಾರಗೆರೆ ಗ್ರಾಮದ ಮುಖಾಂತರ ದುಮ್ಮಸಂದ್ರ ಗ್ರಾಮವನ್ನು ತಲುಪಬಹುದು.ಇನ್ನು ಅಡವೀಕಟ್ಟೆ ಜಲಪಾತಕ್ಕೆ ಸೋಮನಹಳ್ಳಿ ಮತ್ತು ಚೀಣ್ಯ ಗ್ರಾಮಗಳ ರಸ್ತೆಯ ಮೂಲಕ ಅಡವೀಕಟ್ಟೆ ಗ್ರಾಮಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ಎಡಕ್ಕೆ ತಿರುವು ತೆಗೆದುಕೊಂಡರೆ ಸ್ಥಳಕ್ಕೆ ತಲುಪಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.