ADVERTISEMENT

42,919 ‘ಇ–ಖಾತಾ’ ವಿತರಣೆ ಬಾಕಿ

ಇ–ಆಸ್ತಿ ತಂತ್ರಾಂಶದಲ್ಲಿ ಸೇವೆ ಲಭ್ಯ; ಡೌನ್‌ಲೋಡ್‌, ತಿದ್ದುಪಡಿಗೆ ಅವಕಾಶ

ಸಿದ್ದು ಆರ್.ಜಿ.ಹಳ್ಳಿ
Published 21 ಡಿಸೆಂಬರ್ 2025, 5:05 IST
Last Updated 21 ಡಿಸೆಂಬರ್ 2025, 5:05 IST
ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ   

ಮಂಡ್ಯ: ಜಿಲ್ಲೆಯ ಎಂಟು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 42,919 ಇ–ಖಾತಾಗಳನ್ನು ಆಸ್ತಿಯ ಮಾಲೀಕರಿಗೆ ವಿತರಿಸುವುದು ಬಾಕಿ ಇದೆ. 

ಪ್ರಸ್ತುತ ರಾಜ್ಯದ 31 ಜಿಲ್ಲೆಗಳ 320 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡಲು ಬಾಕಿ ಇರುವ 45 ಲಕ್ಷಗಳಿಗೂ ಹೆಚ್ಚು ಆಸ್ತಿಗಳಿಗೆ ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಮಂಡ್ಯ ಜಿಲ್ಲೆಯ 42,919 ಆಸ್ತಿಗಳೂ ಇವೆ. 

ಏನಿದು ಇ–ಖಾತಾ?: ಇದು ಸಾಂಪ್ರದಾಯಿಕ ‘ಎ’ ಖಾತಾದ ಡಿಜಿಟಲ್‌ ರೂಪವಾಗಿದ್ದು, ಆಸ್ತಿ ವಹಿವಾಟುಗಳನ್ನು ಪಾರದರ್ಶಕಗೊಳಿಸಲು ಮತ್ತು ಸರಳೀಕರಿಸಲು ಸಹಕಾರಿಯಾಗಿದೆ. ಇದು ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ವಿವರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು, ತೆರಿಗೆ ಪಾವತಿಸಲು ಮತ್ತು ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಲು ಅನುಮೋದನೆ ನೀಡುತ್ತದೆ. 

ADVERTISEMENT

ತಿದ್ದುಪಡಿಗೂ ಅವಕಾಶ: ಆಸ್ತಿ ಮಾಲೀಕರು www.eaasthi. karanataka. gov.in ವೆಬ್‌ಸೈಟ್‌ ಲಿಂಕ್‌ ಮೂಲಕ ಆನ್‌ಲೈನ್‌ನಲ್ಲಿ ಲಾಗಿನ್‌ ಆಗಿ ತಾವೇ ಸ್ವತಃ ತಮ್ಮ ಆಸ್ತಿಯ ಕರಡು ಇ–ಖಾತಾ ಪ್ರತಿಯನ್ನು ಪರಿಶೀಲಿಸಬಹುದು. ತಿದ್ದುಪಡಿಯ ಅವಶ್ಯವಿದ್ದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ತಿದ್ದುಪಡಿಗೆ ಆನ್‍ಲೈನ್‍ನಲ್ಲಿಯೇ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

‘ಆನ್‍ಲೈನ್‍ನಲ್ಲಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುತ್ತಾರೆ. ಆಸ್ತಿ ಮಾಲೀಕರು ಕಚೇರಿಗೆ ಭೇಟಿ ನೀಡದೇ, ಮನೆಯಲ್ಲೇ ಕುಳಿತು ಆನ್‍ಲೈನ್‍ ಮೂಲಕ ಶುಲ್ಕ ಪಾವತಿಸಿ ದಾಖಲೆಗಳನ್ನು ನೇರವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಕರ್ನಾಟಕ-ಒನ್‌ ಕೇಂದ್ರಗಳಲ್ಲೂ ಸಹ ನಾಗರಿಕರು ತಂತ್ರಾಂಶವನ್ನು ಬಳಸಿ ಸೇವೆಯನ್ನು ಪಡೆದುಕೊಳ್ಳಬಹುದು’ ಎನ್ನುತ್ತಾರೆ ಅಧಿಕಾರಿಗಳು. 

ಅನುಕೂಲಗಳೇನು: ಆಸ್ತಿಗಳನ್ನು ಸುರಕ್ಷಿತಗೊಳಿಸುವುದು. ನಾಗರಿಕರಿಗೆ ತಮ್ಮ ಆಸ್ತಿ ದಾಖಲೆಗಳ ಭದ್ರತೆ ಖಚಿತಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಆಸ್ತಿಗಳ ವಹಿವಾಟಿನಲ್ಲಿನ ಮೋಸ ಮತ್ತು ದೋಷಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಹೆಚ್ಚಿನ ಆಸ್ತಿಗಳನ್ನು ಸರ್ಕಾರಿ ದಾಖಲೆಗಳ ವ್ಯಾಪ್ತಿಗೆ ತರುವ ಉದ್ದೇಶದಿಂದ ಇ-ಖಾತಾ ಲೋಕಾರ್ಪಣೆ ಮಾಡಿ, ಸಾರ್ವಜನಿಕರಿಗೆ ಸುಲಭವಾಗಿ ಇ-ಖಾತಾ ನೀಡುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.