
ಮಂಡ್ಯ: ‘ದೇಶದಲ್ಲಿ ವಿಜ್ಞಾನ ಕ್ಷೇತ್ರವು ಪ್ರಜ್ವಲಿಸುತ್ತಿರುವ ಹೊತ್ತಿನಲ್ಲಿಯೂ ವಿದ್ಯಾವಂತ ಮಹಿಳೆಯರೇ ಹೆಚ್ಚಾಗಿ ಮೌಢ್ಯಾಚರಣೆಯಲ್ಲಿ ಭಾಗಿಯಾಗಿರುವುದು ಅತ್ಯಂತ ಕಳವಳಕಾರಿ’ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವಲಿಂಗಯ್ಯ ವಿಷಾದಿಸಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಕಾಲೇಜು ಪದವಿ ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜಿನ ವಿಜ್ಞಾನ ವೇದಿಕೆ, ಐಕ್ಯೂಎಸಿ, ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶುಕ್ರವಾರ ಆರಂಭವಾದ ವಿಜ್ಞಾನೋತ್ಸವ-2026 ‘ವೈಜ್ಞಾನಿಕ ಅರಿವು ಮತ್ತು ಪವಾಡ ರಹಸ್ಯ ಬಯಲು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿಯೇ ಭಾರತ ದೇಶವು ಮೌಢ್ಯಾಚರಣೆಯಲ್ಲಿ 2ನೇ ಸ್ಥಾನ ಪಡೆದಿದೆ. ಅತ್ಯಾಧುನಿಕ ವಿಜ್ಞಾನ, ತಂತ್ರಜ್ಞಾನ ಹಾಗೂ ವೈಜ್ಞಾನಿಕವೆಂಬ ನಾಗಲೋಟದಲ್ಲಿ ಪ್ರಗತಿ ಸಾಧಿಸುತ್ತಿರುವ ವಿದ್ಯಮಾನಗಳಲ್ಲಿ ಈ ಮೌಢ್ಯ ಆಚರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೂಢನಂಬಿಕೆಗೆ ಕಟ್ಟು ಬಿದ್ದಿರುವುದು ಅಪಾಯಕಾರಿ ಎಂದು ಬೇಸರ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಗುರುರಾಜ ಪ್ರಭು ಮಾತನಾಡಿ, ಸಮಾಜಕ್ಕೆ ಮತ್ತು ಜನರಿಗೆ ವಿಜ್ಞಾನದ ಸಂದೇಶಗಳು ದೊರಕುವಂತೆ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು.
ನಂತರ ಪವಾಡ ರಹಸ್ಯ ಬಯಲುಗಾರರಾದ ಜಯಪ್ರಕಾಶ್, ಸಿ.ಎನ್. ನಂಜರಾಜು ಅವರು ವಿದ್ಯಾರ್ಥಿಗಳ ಮೂಲಕ ವಿವಿಧ ಪವಾಡ ರಹಸ್ಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಗಮನ ಸೆಳೆದರು.
ಶಿಕ್ಷಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎ.ಸಿ.ಜಯಪ್ರಕಾಶ್, ಕೆ.ಎಸ್.ಎಸ್.ಆರ್.ಸಿ ಸದಸ್ಯೆ ಪುಷ್ಪಲತಾ, ಐಕ್ಯೂಎಸಿ ಸಂಯೋಜಕಿ ಪ್ರೊ.ಬಿ.ಜಯಲಕ್ಷ್ಮಿ, ಕಾರ್ಯಕ್ರಮದ ಸಂಚಾಲಕಿ ಡಿ.ಕೆ.ಜ್ಯೋತಿ, ಸಹ ಸಂಚಾಲಕರಾದ ಎಸ್.ಪ್ರದೀಪ್‌ಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ರವಿಕಾಂತ್ ಲಮಾಣಿ ಭಾಗವಹಿಸಿದ್ದರು.
ಮೌಢ್ಯದಿಂದ ಹೊರಬನ್ನಿ: ನಂಜರಾಜು
ವಿಜ್ಞಾನ ವಿಷಯಗಳ ನಿವೃತ್ತ ಪರಿವೀಕ್ಷಕ ಸಿ.ಎನ್. ನಂಜರಾಜು ಮಾತನಾಡಿ ‘ವಿದ್ಯಾರ್ಥಿಗಳು ವಿಜ್ಞಾನವನ್ನು ಕೇವಲ ವಿಷಯವಾಗಿ ಓದುತ್ತಿದ್ದಾರೆ ನಾವು ಕೂಡ ಅದನ್ನೇ ಮಾಡಿದ್ದೇವೆ? ವೈಜ್ಞಾನಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ ಏಕೆ? ವಿದ್ಯಾವಂತರಾದವರು ಮೌಢ್ಯತೆಯಿಂದ ಹೊರಬರದೆ ಜೀವನ ನಡೆಸುತ್ತಿರುವುದು ಇನ್ನಾದರೂ ನಿಲ್ಲಬೇಕು ಜೊತೆಗೆ ಮೌಢ್ಯತೆ ಪ್ರಶ್ನೆ ಮಾಡುವ ಮನೋಭಾವ ಎಲ್ಲೆಡೆ ಹೆಚ್ಚಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.