ADVERTISEMENT

ಶ್ರೀರಂಗಪಟ್ಟಣ: ‘ಸರ್ಕಾರಿ ಶಾಲೆಗೆ ಸೇರುವ ಮಕ್ಕಳಿಗೆ ₹1000 ಪ್ರೋತ್ಸಾಹಧನ’

ಶಾಲಾ ದಾಖಲಾತಿ ಜಾಗೃತಿ ಜಾಥಾದಲ್ಲಿ ಮುಖ್ಯ ಶಿಕ್ಷಕಿ ಸುಬ್ಬುಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 6:18 IST
Last Updated 1 ಡಿಸೆಂಬರ್ 2025, 6:18 IST
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಶಾಲಾ ದಾಖಲಾತಿ ಆಂದೋಲನದ ಜಾಗೃತಿ ಜಾಥಾ ನಡೆಯಿತು
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಶಾಲಾ ದಾಖಲಾತಿ ಆಂದೋಲನದ ಜಾಗೃತಿ ಜಾಥಾ ನಡೆಯಿತು   

ಶ್ರೀರಂಗಪಟ್ಟಣ: ‘ತಾಲ್ಲೂಕಿನ ದೊಡ್ಡಪಾಳ್ಯ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಸುಬ್ಬುಲಕ್ಷ್ಮಿ ತಿಳಿಸಿದರು.

ದೊಡ್ಡಪಾಳ್ಯದಲ್ಲಿ ಶನಿವಾರ ಶಾಲಾ ದಾಖಲಾತಿ ಆಂದೋಲನದ ನಿಮಿತ್ತ ನಡೆದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ದೊಡ್ಡಪಾಳ್ಯ ಸರ್ಕಾರಿ ಶಾಲೆಗೆ 2025–26ನೇ ಸಾಲಿನಲ್ಲಿ ಒಂದನೇ ತರಗತಿಗೆ ಮೂವರು ವಿದ್ಯಾರ್ಥಿಳು ಮಾತ್ರ ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ವೈಯಕ್ತಿಕವಾಗಿ ತಲಾ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದ್ದೇನೆ’ ಎಂದರು.

ADVERTISEMENT

‘ದೊಡ್ಡಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಕ್ಕದ ಚಿಕ್ಕಪಾಳ್ಯ, ಬಸವನಪುರ, ಮುಂಡುಗದೊರೆ ಮತ್ತು ಹಂಗರಹಳ್ಳಿ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು ಕರೆ ತರಲು ಖಾಸಗಿಯಾಗಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಅದರ ಖರ್ಚನ್ನು ಶಿಕ್ಷಕರೇ ಭರಿಸುತ್ತಿದ್ದೇವೆ. ಒಂದರಿಂದ 5ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ. ಸ್ಪೋಕನ್‌ ಇಂಗ್ಲಿಷ್‌ ಮತ್ತು ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ ಉಚಿತವಾಗಿ ಟ್ರ್ಯಾಕ್‌ ಸೂಟ್ ಕೂಡ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಗ್ರಾಮದ ವಿವಿಧ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಮನೆ ಮನೆಗೆ ಕರ ಪತ್ರ ಹಂಚಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಯೋಗೇಶ್, ರಾಜೇಶ್, ಶಿಕ್ಷಕರಾದ ವೆಂಕಟೇಶ್, ವಸಂತಲಕ್ಷ್ಮಿ, ಶಾಂತಲಾ, ರಮ್ಯಾಶ್ರೀ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.