ADVERTISEMENT

ಮಳವಳ್ಳಿ | ಕಲುಷಿತ ಆಹಾರ ಪ್ರಕರಣ: ಶೈಕ್ಷಣಿಕ ಚಟುವಟಿಕೆ ಸ್ಥಗಿತ; ಪೋಷಕರ ಆತಂಕ

ಗೋಕುಲ ವಿದ್ಯಾಸಂಸ್ಥೆಯಲ್ಲಿ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣ

ಟಿ.ಕೆ.ಲಿಂಗರಾಜು
Published 20 ಮಾರ್ಚ್ 2025, 4:21 IST
Last Updated 20 ಮಾರ್ಚ್ 2025, 4:21 IST
ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಬಳಿಯ ಗೋಕುಲ ವಿದ್ಯಾಸಂಸ್ಥೆ
ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಬಳಿಯ ಗೋಕುಲ ವಿದ್ಯಾಸಂಸ್ಥೆ   

ಮಳವಳ್ಳಿ: ಕಲುಷಿತ ಆಹಾರ ಸೇವಿಸಿ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ನಂತರ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಇದರಿಂದ ಪೋಷಕರಲ್ಲಿ ಆತಂಕ ಮನೆಮಾಡಿದೆ.

ತಾಲೂಕು ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯಲ್ಲಿ ಹೊರ ರಾಜ್ಯದ ಹತ್ತಾರು ವಿದ್ಯಾರ್ಥಿಗಳು ದಾಖಲಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿದ್ಯಾಸಂಸ್ಥೆಯು ಕೇವಲ ನರ್ಸರಿಯಿಂದ 8ನೇ ತರಗತಿವರೆಗೆ ಮಾತ್ರ ಶಾಲೆ ನಡೆಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿದ್ದು, 9, 10ನೇ ತರಗತಿಯ 11 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಹೇಗೆ? ಎಂಬ ಪ್ರಶ್ನೆ ಕಾಡತೊಡಗಿದೆ.

‘ತಾಲ್ಲೂಕಿನ ಸುಜ್ಜಲೂರು ಬಳಿಯ ಸೆಂಟ್ ಮೀರಾಸ್ ಇನ್ ಕ್ಲೂಸಿವ್ ಶಾಲೆಯಲ್ಲಿ 9 ಹಾಗೂ 10ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಅನಧಿಕೃತವಾಗಿ ಗೋಕುಲ ವಿದ್ಯಾಸಂಸ್ಥೆಯಲ್ಲಿ ಪಾಠ ಮಾಡುತ್ತಿದ್ದರು’ ಎಂದು ಮೂಲಗಳಿಂದ ತಿಳಿದು ಬಂದಿದೆ.

ADVERTISEMENT

‘ಸುತ್ತಮುತ್ತಲ ಹಳ್ಳಿಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೋಕುಲ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ ಅಂತರರಾಜ್ಯದ 24 ಮಕ್ಕಳು ಸೇರಿದ್ದರು. ಆದರೆ ಶಾಲೆಯ ಕಾರ್ಯದರ್ಶಿ ಲಂಕೇಶ್ ಹೇಳಿದಂತೆ ಅವರು ಯಾರೂ ಅನಾಥ ಮಕ್ಕಳಲ್ಲ. ತಂದೆ ತಾಯಿ ಇದ್ದಾರೆ ಎನ್ನುತ್ತವೆ’ ಶಾಲೆಯ ದಾಖಲೆಗಳು.

‘ಶಿಕ್ಷಣ ಇಲಾಖೆಯಿಂದ 8ನೇ ತರಗತಿವರೆಗೆ ಅನುಮತಿ ಪಡೆದು ಅನಧಿಕೃತವಾಗಿ ಶಾಲೆಯಲ್ಲಿಯೇ ಮಕ್ಕಳನ್ನು ಉಳಿಸಿಕೊಂಡು ಪಾಠ ಮಾಡುತ್ತಿರುವುದು ಘಟನೆ ನಡೆಯುವವರೆಗೂ ಬೆಳಕಿಗೆ ಬಾರದೆ ಇರುವುದು ಇಡೀ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ಹಿಡಿದಿದೆ. 24 ಅಂತರರಾಜ್ಯ ಮಕ್ಕಳಿಗೆ ವಸತಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸದೆ ಶಾಲೆಯಲ್ಲಿನ ಕೊಠಡಿಯಲ್ಲಿಯೇ ಉಳಿಸಿಕೊಂಡು ಮಕ್ಕಳಿಗೆ ಮದುವೆ, ಶುಭ ಸಮಾರಂಭಗಳು, ಕೆಲವು ಸಂದರ್ಭದಲ್ಲಿ ಹೋಟೆಲ್ ಗಳಲ್ಲೂ ಉಳಿದ ಆಹಾರವನ್ನೇ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು’ ಎಂದು ಪ್ರಗತಿಪರ ಚಿಂತಕ, ನಿವೃತ್ತ ಪ್ರಾಂಶುಪಾಲ ಎಂ.ವಿ.ಕೃಷ್ಣ ಆರೋಪಿಸಿದರು.

ಗೋಕುಲ ವಿದ್ಯಾ ಸಂಸ್ಥೆಯು ಹಣ ಮಾಡುವ ದೃಷ್ಟಿಯಿಂದ ಮೇಘಾಲಯದ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಅವರ ಭವಿಷ್ಯವನ್ನು ಹಾಳು ಮಾಡುತ್ತಿದೆ. 24 ಮಕ್ಕಳು ಇಲ್ಲಿಗೆ ದಾಖಲಾಗುವ ಮೊದಲು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೇರೊಂದು ಶಾಲೆಯಿಂದ ಬಂದು ದಾಖಲಾಗಿದ್ದಾರೆ ಎನ್ನುವ ಮಾಹಿತಿ ಇದ್ದು, ಆಡಳಿತ ಮಂಡಳಿಯವರು ಹೇಳುವ ಪ್ರಕಾರ ಅನಾಥ ಮಕ್ಕಳೆಂಬ ಮಾಹಿತಿ ಇದೆ. ಇದರಲ್ಲಿ ಅಂತರರಾಜ್ಯ ಜಾಲ ಅಡಗಿದೆ. ಇಂಥ ಬಡ ಮಕ್ಕಳ ಬಳಸಿಕೊಂಡು ವಿದೇಶಿ ದೇಣಿಗೆ, ಕೆಲವು ಕಂಪನಿಗಳಿಂದ ಧನ ಸಹಾಯ ಪಡೆಯುತ್ತಾರೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಪ್ರಗತಿಪರ ಹೋರಾಟಗಾರ ಎನ್.ಎಲ್.ಭರತ್ ರಾಜ್ ಆರೋಪಿಸಿದರು.

ಇಂದು ಪೋಷಕರ ಸಭೆ

ವಿದ್ಯಾಸಂಸ್ಥೆಯ ಮಕ್ಕಳ ಪೋಷಕರು ಯಾವುದೇ ಆತಂಕ ಪಡೆಬೇಕಾಗಿಲ್ಲ ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಾ.20ರಂದು ಪೋಷಕರ ಸಭೆ ಕರೆದು ಚರ್ಚಿಸಲಾಗುವುದು. ಅಲ್ಲದೇ ನಮ್ಮ ಸರ್ಕಾರಿ ಶಾಲೆಯ ಶಿಕ್ಷಕರನ್ನು ಬಳಸಿಕೊಂಡು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ತಿಳಿಸಿದರು.

ಶಾಲಾ ಕೊಠಡಿ ಅವ್ಯವಸ್ಥೆ; ಅಸಮಾಧಾನ

ಮಳವಳ್ಳಿ: ಕಲುಷಿತ ಆಹಾರ ಸೇವಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳು ವ್ಯಾಸಂಗ ಮಾಡುತ್ತಿರುವ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಯ ಎಲ್ಲ ಕೊಠಡಿಗಳನ್ನು ಹೊರಗಡೆಯಿಂದ ಪರಿಶೀಲಿಸಿ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ಅವರಿಂದ ಮಕ್ಕಳ ದಾಖಲಾತಿ, ಮೇಘಾಲಯದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮೇಘಾಲಯ ಆಡಳಿತ ಇಲಾಖೆಯ ಆಯುಕ್ತ ಸಿರಿಲ್, ಕಾರ್ಯದರ್ಶಿ ಕ್ರಯಿಲ್ ವಿ ಡಿಂಗ್ ದೋ ಸಹ ಅಧಿಕಾರಿಗಳಿಂದ ಮಕ್ಕಳ ಸ್ಥಿತಿಗತಿಯ ಬಗ್ಗೆ ವಿಚಾರಿಸಿದರು.

ಆಯೋಗದ ಸದಸ್ಯ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಡಿಡಿಪಿಐ ಎಚ್‌.ಆರ್‌.ಶಿವರಾಮೇಗೌಡ, ಸಿಪಿಐ ಬಿ.ಜಿ.ಮಹೇಶ್‌, ಶಿಕ್ಷಣ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.