
ಭಾರತೀನಗರ: ಮದ್ದೂರು ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಎರಡನೇ ಸ್ಥಾನದಲ್ಲಿರುವ ಮುಟ್ಟನಹಳ್ಳಿ ಸಮೀಪದ ಸೂಳೆಕೆರೆಯು ಒತ್ತುವರಿಯಿಂದ ದಿನೇ ದಿನೇ ಕಿರಿದಾಗುತ್ತಿದೆ. ಕೆರೆಯಲ್ಲಿ ಹೂಳು ಸಹ ತುಂಬಿಕೊಂಡಿದ್ದು, ನೀರು ಸಂಗ್ರಹಣಾ ಸಾಮರ್ಥ್ಯ ಕುಸಿಯುತ್ತಿದೆ.
948 ಎಕರೆ ವಿಸ್ತೀರ್ಣದಲ್ಲಿ ಹರಡಿದ್ದ ಕೆರೆಯನ್ನು ಮಾದರಹಳ್ಳಿ, ಅಂಬರಹಳ್ಳಿ, ಮುಟ್ಟನಹಳ್ಳಿ ಸೇರಿದಂತೆ ಮತ್ತಿತರ ಗ್ರಾಮಗಳ ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಈಗ ಕೆರೆಯ ವಿಸ್ತೀರ್ಣ 600 ಎಕರೆಗೆ ಬಂದು ತಲುಪಿದೆ.
ಈ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ 401.67 ಮಿಲಿಯನ್ ಕ್ಯೂಬಿಕ್ ಫೀಟ್ (ಎಂ.ಸಿ.ಎಫ್) ಅಂದರೆ 0.4 ಟಿ.ಎಂ.ಸಿ (ಥೌಸಂಡ್ ಮಿಲಿಯನ್ ಕ್ಯೂಬಿಕ್ ಫೀಟ್) ಹೊಂದಿದೆ. ಈ ಕೆರೆ ಎರಡು ನಾಲೆಗಳನ್ನು ಹೊಂದಿದೆ. 17 ಕಿ.ಮೀ ಉದ್ದದ ಉತ್ತರ ನಾಲೆಯಿದ್ದು, ಅಜ್ಜಹಳ್ಳಿ, ಮಠದದೊಡ್ಡಿ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶವಾಗಿದ್ದು, ಈ ನಾಲೆ 2725 ಎಕರೆಯಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿದೆ. ದಕ್ಷಿಣ ನಾಲೆ 11.5 ಕಿ.ಮೀ ಉದ್ದವಿದ್ದು, ಅಣ್ಣೂರು, ಕಾರ್ಕಹಳ್ಳಿ ಕೊನೆ ಬಾಗದ ಅಚ್ಚುಕಟ್ಟು ಪ್ರದೇಶವಾಗಿದ್ದು, ಇದು 3725 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.
ಸೂಳೆಕೆರೆಯು ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವುದಷ್ಟೇ ಅಲ್ಲದೆ ದೊಡ್ಡಅರಸಿನಕೆರೆಯ 2 ಕೆರೆಗಳು, ಗುರುದೇವರಹಳ್ಳಿಯ ಕೆರೆ, ಮುಟ್ಟನಹಳ್ಳಿ ಕೆರೆ, ಅಜ್ಜಹಳ್ಳಿ ಕೆರೆ, ಬೊಮ್ಮನದೊಡ್ಡಿ ಸಣ್ಣ ಕಟ್ಟೆಗಳು, ಛತ್ರದಹೊಸಹಳ್ಳಿ ಸಣ್ಣಕೆರೆ ಸೇರಿದಂತೆ ಹತ್ತಾರು ಕೆರೆಗಳಿಗೆ ಜೀವಸೆಲೆಯಾಗಿದೆ.
‘ಕೆರೆಯು ಮೊದಲು 40 ಅಡಿ ಆಳವಿದ್ದು, ಈಗ ಸುಮಾರು 18 ಅಡಿಗಳಷ್ಟು ಹೂಳು (ಶಿಲ್ಟ್) ತುಂಬಿಕೊಂಡಿದೆ. ಈ ಹೂಳನ್ನು ತೆಗೆದರೆ ನೀರು ಸಂಗ್ರಹಣೆ ಹೆಚ್ಚಾಗುತ್ತದೆ. ರಾಜ್ಯ ಸರ್ಕಾರ ಕೆರೆಗಳ ಆಧುನೀಕರಣಕ್ಕೆ ಮುಂದಾಗಿದ್ದು, ಕಳೆದ ತಿಂಗಳ ಹಿಂದಷ್ಟೇ ಕೆರೆಯ ಆಧುನೀಕರಣಕ್ಕಾಗಿ ₹34 ಕೋಟಿ, ನಾಲೆಗಳ ಆಧುನೀಕರಣಕ್ಕಾಗಿ ₹̤ 47.75 ಕೋಟಿ ಬಿಡುಗಡೆಗೊಳಿಸಿದೆ. ಈ ಹಣ ಸದ್ಬಳಕೆಯಾಗಿ ಕೆರೆ ಆಧುನೀಕರಣಗೊಂಡಲ್ಲಿ ಬಹುಶಃ 0.10 ಟಿಎಂಸಿಯಷ್ಟು ನೀರು ಸಂಗ್ರಹವಾಗಲಿದೆ’ ಎನ್ನುತ್ತಾರೆ ರೈತರು.
‘ನಾಲೆಗಳಿಂದ 15 ಹಳ್ಳಿಗಳ ರೈತರ ಜಮೀನುಗಳಿಗೆ ನೀರುಣಿಸುತ್ತದೆ. ಎಲ್ಲಾ ಹಳ್ಳಿಗಳಲ್ಲೂ ಕೂಡ ಇಂದಿಗೂ ಭತ್ತ, ಕಬ್ಬು ಸೇರಿದಂತೆ ಮತ್ತಿತರ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಈ ಕೆರೆಯನ್ನು ಇಬ್ಬರು ಅಕ್ಕ–ತಂಗಿ ವೇಶ್ಯೆಯರು ಕಟ್ಟಿಸಿದ್ದು ಎಂದು ಇತಿಹಾಸ ಹೇಳುತ್ತದೆ. ಆ ಕಾಲ ಘಟ್ಟದಲ್ಲಿ ಕೆರೆ, ಕಟ್ಟೆಗಳಿಗೆ ಪ್ರಾಮುಖ್ಯತೆಯಿದ್ದು, ಅಕ್ಕ-ತಂಗಿಯರ ಶ್ರಮ ನಿಜಕ್ಕೂ ಸಾರ್ಥಕ ಎನಿಸುತ್ತದೆ. ಕೆರೆಗಳ ಅವಸಾನ ಮಾನವರ ಅವಸಾನಕ್ಕೆ ನಾಂದಿ ಹಾಡಲಿದ್ದು, ಕೆರೆಗಳ ಪುನರುಜ್ಜೀವನಕ್ಕೆ ಜನಪ್ರತಿನಿಧಿಗಳು, ಸರ್ಕಾರ ಮುಂದಾಗಬೇಕಿದೆ’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆರೆಯ ಆಧುನೀಕರಣಕ್ಕೆ ₹32 ಕೋಟಿ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಮೂಲಕ ಹೂಳು ತೆಗೆಯುವ ಜೊತೆಗೆ ಒತ್ತುವರಿಯಾಗಿರುವ ಕೆರೆಯ ಜಾಗವನ್ನು ತೆರವುಗೊಳಿಸಿ ಸುತ್ತಲೂ ಟ್ರಂಚ್ ತೆಗೆಸುತ್ತೇವೆಎಲ್.ಪ್ರಶಾಂತ್ ಲಿಂಗಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ ಭಾರತೀನಗರ ಶಾಖೆ
ಅಣ್ಣೂರು ಗ್ರಾಮ ಸೂಳೆಕೆರೆಯ ಕೊನೆಯ ಅಚ್ಚುಕಟ್ಟು ಪ್ರದೇಶವಾಗಿದ್ದು 20 ವರ್ಷಗಳ ಹಿಂದೆ ನಾಲೆಗೆ ಸಮೃದ್ಧವಾಗಿ ನೀರು ಹರಿದು ಬರುತ್ತಿತ್ತು. ಕೆರೆಯಲ್ಲಿ ಹೂಳು ತುಂಬಿರುವ ಕಾರಣ ನಾಲೆಯಲ್ಲಿ ನೀರಿನ ಹರಿವು ಕ್ಷೀಣಿಸಿದೆ.ರಾಜಣ್ಣ, ರೈತ ಮುಖಂಡ ಅಣ್ಣೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.