ಶ್ರೀರಂಗಪಟ್ಟಣ: ತಾಲ್ಲೂಕಿನ ಹಲವು ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಶಾಲೆ ತೊರೆಯುತ್ತಿದ್ದಾರೆ. 29 ಶಾಲೆಗಳಲ್ಲಿ ಈ ಬಾರಿ ಒಂದನೇ ತರಗತಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ.
ಪಟ್ಟಣದ ಗುರುಭವನ ಪಕ್ಕದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 22 ವಿದ್ಯಾರ್ಥಿಗಳು ಈ ಬಾರಿ ಶಾಲೆ ತೊರೆದಿದ್ದಾರೆ. ಕಳೆದ ವರ್ಷ ಈ ಶಾಲೆಯಲ್ಲಿ 52 ವಿದ್ಯಾರ್ಥಿಗಳಿದ್ದರು. ಈ ವರ್ಷ 1ರಿಂದ 7ನೇ ತರಗತಿವರೆಗೆ 30 ವಿದ್ಯಾರ್ಥಿಗಳು ಮಾತ್ರ ಉಳಿದಿದ್ದಾರೆ.
‘ಈ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಿಸಿಯೂಟ ಅಡುಗೆಗೂ ನೀರು ಸಿಗದೆ ಮುಂಜಾನೆಯೇ ಬಂದು ಬೇರೆ ಕಡೆಯಿಂದ ತಂದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಮಳೆ ಬಂದರೆ ಅಡುಗೆ ಮನೆ ಸೋರುತ್ತದೆ’ ಎಂದು ಶಾಲೆಯ ಮುಖ್ಯ ಅಡುಗೆಯವರಾದ ಚಿಕ್ಕತಾಯಮ್ಮ ಸಮಸ್ಯೆ ತೋಡಿಕೊಳ್ಳುತ್ತಾರೆ.
‘ಗುರುಭವನ ಪಕ್ಕದ ಸರ್ಕಾರಿ ಶಾಲೆಯಲ್ಲಿ ನೀರಿಲ್ಲದ ಕಾರಣ ಶೌಚಾಲಯಗಳು ಗಬ್ಬು ನಾರುತ್ತಿವೆ. ಹಾಗಾಗಿ ನಮ್ಮ ಮಗ ಶೌಚಕ್ಕೆಂದು ದಿನಕ್ಕೆ ಎರಡು ಬಾರಿ ಶಾಲೆಯಿಂದ ಮನೆಗೆ ಬಂದು ಹೋಗುತ್ತಾನೆ. ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪೋಷಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
‘ತಾಲ್ಲೂಕಿನಲ್ಲಿ 61 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ 59 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿವೆ. ಈ ಪೈಕಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ, 29 ಸರ್ಕಾರಿ ಶಾಲೆಗಳಿಗೆ 1ನೇ ತರಗತಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿರುವುದರಿಂದ ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಮಂದಿ ಶಿಕ್ಷಕರು ‘ಹೆಚ್ಚುವರಿ’ ಎನಿಸಿದ್ದಾರೆ. ಇಂತಹ ಬೆಳವಣಿಗೆಯನ್ನು ನಿರೀಕ್ಷಿಸಿರಲಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಆರ್.ಪಿ. ತಿಳಿಸಿದರು.
‘ಬಲ್ಲೇನಹಳ್ಳಿ, ಚಂದಗಿರಿಕೊಪ್ಪಲು, ಚಿನ್ನೇನಹಳ್ಳಿ, ಸಿದ್ದಾಪುರ, ಗರುಡನ ಉಕ್ಕಡ ಸರ್ಕಾರಿ ಶಾಲೆಗಳಿಗೆ ಈ ವರ್ಷ ಒಂದನೇ ತರಗತಿಗೆ ಒಬ್ಬ ವಿದ್ಯಾರ್ಥಿಯೂ ಸೇರಿಲ್ಲ’ ಎಂದು ದರಸಗುಪ್ಪೆ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಸಿಆರ್‌ಪಿ ಸಿ.ಟಿ. ರಮೇಶ್ ತಿಳಿಸಿದರು.
‘ಪಟ್ಟಣ ವ್ಯಾಪ್ತಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಗುರುಭವನ ಶಾಲೆ ಮತ್ತು ಗಂಜಾಂನ ಮೀನುಗಾರಿಕಾ ಸರ್ಕಾರಿ ಶಾಲೆಗಳಲ್ಲೂ ಒಂದನೇ ತರಗತಿಗೆ ದಾಖಲಾತಿ ನಡೆದಿಲ್ಲ’ ಎಂದು ಕಸಬಾ ಸಂಪನ್ಮೂಲ ಕೇಂದ್ರದ ಸಿಆರ್‌ಪಿ ಶಿವಕುಮಾರ್ ಮಾಹಿತಿ ನೀಡಿದರು.
‘ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಬಿಸಿಯೂಟ, ಸಮವಸ್ತ್ರ ಇತರ ಸವಲತ್ತುಗಳೂ ಸಿಗುತ್ತಿವೆ. ಆದರೆ, ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಬಯಸುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಸಿಗುತ್ತಿಲ್ಲ ಎಂಬ ಕಾರಣ ಹೇಳಿ ನಮ್ಮ ಶಾಲೆಯ ಸಾಕಷ್ಟು ವಿದ್ಯಾರ್ಥಿಗಳು ಈ ವರ್ಷ ಶಾಲೆ ಬಿಟ್ಟು ಹೋಗಿದ್ದಾರೆ’ ಎಂದು ಪಟ್ಟಣದ ಗುರು ಭವನದ ಪಕ್ಕದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೆಸಿಂತಾ ಕಾರಣ ನೀಡಿದರು.
ಕ್ಷೀಣಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಸೌಲಭ್ಯ ಒದಗಿಸದಿರುವುದಕ್ಕೆ ಪೋಷಕರ ಆಕ್ರೋಶ ಶೌಚಕ್ಕೆಂದು ಮನೆಗೆ ಬಂದು ಹೋಗುವ ಸ್ಥಿತಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.