ಮಳವಳ್ಳಿ: ವಿದ್ಯಾರ್ಥಿಗಳು ಬಾಲ್ಯದಿಂದಲೇ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಂದ್ರ ಕರೆ ನೀಡಿದರು.
ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿಯ ಆದರ್ಶ ವಿದ್ಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ಭಾರತ್ ವಿಕಾಸ್ ಪರಿಷತ್ ಆಯೋಜಿಸಿದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ವರ್ಷ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ 10 ಸಾವಿರ ಗಿಡ ನೆಟ್ಟು ಪೋಷಣೆ ಮಾಡುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಗಳು ನೆಟ್ಟ ಗಿಡಗಳ ಪೋಷಣೆ ಮಾಡಲು ಮುಂದಾಗಿ ಪರಿಸರ ಕಾಳಜಿ ರೂಢಿಸಿಕೊಳ್ಳಬೇಕು ಎಂದರು.
ನ್ಯಾಯಾಧೀಶ ಎಂ.ಮಹೇಂದ್ರ ಅವರು ಶಾಲೆಯ ಕೊಠಡಿ, ಅಡುಗೆ ಮನೆ ಹಾಗೂ ಶೌಚಾಲಯವನ್ನು ಪರಿಶೀಲಿಸಿ ಅಶುಚಿತ್ವನ್ನು ಕಂಡು ಸ್ಥಳದಲ್ಲಿಯೇ ಪ್ರಾಂಶುಪಾಲರು ಹಾಗೂ ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಇಂಥ ಕೊಠಡಿಯೊಳಗೆ ಮಕ್ಕಳು ಹೇಗೇ ಪಾಠ ಕಲಿಯಲು ಸಾಧ್ಯ. ನಿಮ್ಮ ಮಕ್ಕಳು ಕಲಿಯುವ ಶಾಲೆಯು ಇದೇ ರೀತಿ ಇದೆಯೇ? ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿ ಇಲ್ಲದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್ ಹಾಗೂ ಸದಸ್ಯರು ಶಾಲೆಯ ಆವರಣಕ್ಕೆ ಹೊಂದುಕೊಂಡಂತೆ ಇರುವ ಶಿಥಿಲ ಕಟ್ಟಡ ಹಾಗೂ ನೀರಿನ ಟ್ಯಾಂಕ್ ನೆಲಸಮದ ಬಗ್ಗೆ ನ್ಯಾಯಾಧೀಶರ ಗಮನ ಸೆಳೆದರು. ಈ ಬಗ್ಗೆ ಕಾನೂನು ಸೇವಾ ಸಮಿತಿಗೆ ಪತ್ರ ನೀಡಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಎಂ.ಮಹೇಂದ್ರ ತಿಳಿಸಿದರು.
ಸಹಾಯಕ ಸರ್ಕಾರಿ ಅಭಿಯೋಜ ಶಂಕರಸ್ವಾಮಿ, ಹೆಚ್ಚುವರಿ ಸರ್ಕಾರಿ ವಕೀಲ ಎಂ.ಎಸ್.ಶ್ರೀಕಂಠಸ್ವಾಮಿ, ನಿಂಗರಾಜುಗೌಡ, ಪ್ರಾಂಶುಪಾಲ ಶಿವರಾಜು, ಸಾಲು ಮರದ ನಾಗರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.