ADVERTISEMENT

ಉರುಳಿದ ವಿದ್ಯುತ್‌ ಕಂಬ; ಎಕ್ಸ್‌ಪ್ರೆಸ್‌ವೇ ಬಂದ್‌

ಬಿರುಗಾಳಿ, ಮಳೆ; ಕುಸಿದ ಬಿದ್ದ ಮರಗಳು, ಹಾರಿದ ಚಾವಣಿ, ಸ್ವಾಗತ ಕಮಾನು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 17:05 IST
Last Updated 18 ಏಪ್ರಿಲ್ 2024, 17:05 IST
ಬಿರುಗಾಳಿ ಮಳೆಗೆ ಮಂಡ್ಯ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ನೆಲಕ್ಕುರುಳಿರುವುದು
ಬಿರುಗಾಳಿ ಮಳೆಗೆ ಮಂಡ್ಯ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ನೆಲಕ್ಕುರುಳಿರುವುದು   

ಮಂಡ್ಯ: ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸೇರಿದಂತೆ ಹಲವೆಡೆ ವಿದ್ಯುತ್‌ ಕಂಬ, ಮರಗಳು ನೆಲಕ್ಕುರುಳಿ ಅವಾಂತರ ಸೃಷ್ಟಿಯಾಗಿದೆ.

ಎಕ್ಸ್‌ಪ್ರೆಸ್‌ ವೇ, ಸರ್ವೀಸ್‌ ರಸ್ತೆಯಲ್ಲಿ 20ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು ವಾಹನ ಸಂಚಾರ ಬಂದ್‌ ಆಗಿತ್ತು. ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್‌ ನಿಂದ ಇಂಡುವಾಳು ಗ್ರಾಮದವರೆಗೂ ಕಂಬಗಳು ಬಿದ್ದಿದ್ದವು. ತಂತಿಗಳು ರಸ್ತೆಯಲ್ಲೇ ಬಿದ್ದಿದ್ದ ಕಾರಣ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನಗಳು ಮುಂದೆ ಚಲಿಸದೇ ನಿಂತಿದ್ದವು.

ಈ ವೇಳೆ ಹಲವು ಕಾರುಗಳು ಒಂದಕ್ಕೊಂದು ಗುದ್ದಿಕೊಂಡು ಜಖಂಗೊಂಡವರು. ಅರ್ಧ ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಬಂದ ಸೆಸ್ಕ್‌ ಸಿಬ್ಬಂದಿ ಕಂಬಗಳನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಸಹಜ ಸ್ಥಿತಿಗೆ ಬಂತು.

ADVERTISEMENT

ಸರ್ವೀಸ್‌ ರಸ್ತೆಯಲ್ಲೂ ಕಂಬಗಳು ಉರುಳಿದ್ದ ಕಾರಣ ವಾಹನಗಳು ಬದಲೀ ಮಾರ್ಗದ ಮೂಲಕ ಓಡಾಡಿದವು. ಶ್ರೀರಂಗಪಟ್ಟಣ ಕಡೆಯಿಂದ ಬರುತ್ತಿದ್ದ ವಾಹನಗಳು ಸಿದ್ದಯ್ಯನಕೊಪ್ಪಲು, ಕೊಡಿಯಾಲ, ಯಲಿಯೂರು ಸರ್ಕಲ್‌ ಮಾರ್ಗಗಳ ಮೂಲಕ ನಗರ ತಲುಪಿದವು.

ಉರುಳಿದ ಸ್ವಾಗತ ಕಮಾನು: ರಾಷ್ಟ್ರೀಯ ಹೆದ್ದಾರಿ ನಗರ ಪ್ರವೇಶದ್ವಾರದಲ್ಲಿರುವ ಬಾಲಂಗಾಧರನಾಥ ಸ್ವಾಮೀಜಿ ಸ್ವಾಗತ ಕಮಾನು ಕೂಡ ಉರುಳಿ ಬಿದ್ದಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೆದ್ದಾರಿ, ಕಲ್ಲಹಳ್ಳಿ, ನೂರಡಿ ರಸ್ತೆ, ಸುಭಾಷ್‌ ನಗರ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಮರ, ರೆಂಬೆ ಕೊಂಬೆಗಳು ನೆಲಕ್ಕುರುಳಿವೆ.

ಶ್ರೀರಂಗಪಟ್ಟಣದಿಂದ ನಗರದವರೆಗೂ ವಿವಿಧ ಹಳ್ಳಿಗಳಲ್ಲಿ ವಿದ್ಯುತ್‌ ವಿದ್ಯುತ್‌ ಸ್ಥಗಿತಗೊಂಡಿದ್ದ ಕಾರಣ ಜನರು ಶೆಖೆಯಿಂದ ಪರದಾಡಬೇಕಾಯಿತು.

ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಾಗಾಲದಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ಪ್ರೇಮಮ್ಮ ಎಂಬವರ ಮನೆಯ ಚಾವಣಿ ಹಾರಿ ಹೋಗಿದೆ

ಬಿರುಗಾಳಿಗೆ ಹಾರಿದ ಹತ್ತಕ್ಕೂ ಹೆಚ್ಚು ಮನೆಗಳ ಚಾವಣಿ

ಶ್ರೀರಂಗಪಟ್ಟಣ: ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲ್ಲೂಕಿನ ಮರಳಾಗಾಲ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳ ಚಾವಣಿಗಳು ಹಾರಿ ಹೋಗಿವೆ. ಗ್ರಾಮದ ಬೋರೆ ಪ್ರದೇಶದಲ್ಲಿರುವ ಪ್ರೇಮಮ್ಮ ಭಾಗ್ಯಮ್ಮ ನಿಂಗಣ್ಣ ಲಕ್ಷ್ಮಮ್ಮ ಸ್ವಾಮಿ ನರಸಿಂಹ ಇತರರ ಮನೆಗಳ ಹೆಂಚುಗಳು ಜಂತಿ ಸಹಿತ ಮುರಿದು ಬಿದ್ದಿವೆ. ಕಲ್ನಾರ್‌ ಸೀಟುಗಳು ಹತ್ತಾರು ಮೀಟರ್‌ ದೂರ ಹಾರಿ ಹೋಗಿ ಬಿದ್ದಿವೆ. ಕೆಲವು ಮನೆಗಳ ಜಂತಿ ರಿಪೀಸುಗಳು ಕೂಡ ಮುರಿದಿವೆ. ಮೇಲೆ ಹೆಂಚುಗಳು ಬಿದ್ದ ಪರಿಣಾಮ ಮನೆಯಲ್ಲಿದ್ದ ಪಾತ್ರೆ ಪಗಡೆ ಬಟ್ಟೆ ಆಹಾರ ಧಾನ್ಯ ಮತ್ತು ಟಿವಿಗಳು ಹಾನಿಗೀಡಾಗಿವೆ. ಮನೆಗಳಲ್ಲಿ ಇದ್ದವರಿಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಇದೇ ಗ್ರಾಮದ ಕೃಷ್ಣೇಗೌಡ ಅವರ ಆಲೆಮನೆಯ ಛಾವಣಿಯ ಕಲ್ನಾರ್‌ ಸೀಟುಗು ಅರ್ಧದಷ್ಟು ಮುರಿದು ಬಿದ್ದಿವೆ. ‘ಸುಮಾರು ₹ ಒಂದು ಲಕ್ಷ ನಷ್ಟ ಉಂಟಾಗಿದೆ’ ಎಂದು ಕೃಷ್ಣೇಗೌಡ ಹೇಳಿದ್ದಾರೆ. ‘ಬಿರುಗಾಳಿಯಿಂದ ಹಾನಿಗೀಡಾಗಿರುವ ಮನೆಗಳ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ಕೃಷ್ಣೇಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ತಾಲ್ಲೂಕಿನ ಗೌರಿಪುರ ಬಳಿ ಬಿರುಗಾಳಿಗೆ ಎರಡು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಪೀಹಳ್ಳಿ ಬಳಿ ನಾಲೆಯ ತಿರುವಿನಲ್ಲಿ ಬುಧವಾರ ರಾತ್ರಿ ಅರಳಿಮರದ ರೆಂಬೆ ಮುರಿದು ಗುಡಿಸಲಿನ ಮೇಲೆ ಬಿದ್ದಿದೆ. ಗುಡಿಸಲಿನಲ್ಲಿ ಮಲಗಿದ್ದ ಲಕ್ಷ್ಮಣ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.