
ಪಾಂಡವಪುರ: ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀಜಿ ವಿರುದ್ಧ ಕೆಟ್ಟದಾಗಿ ಬಿಂಬಿಸಿ, ಸುಳ್ಳು ಅಪಪ್ರಚಾರದಲ್ಲಿ ತೊಡಗಿರುವುದು ನೋವಿನ ಸಂಗತಿ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಹೇಳಿದರು.
ಪಟ್ಟಣದ ವಿದ್ಯಾ ಪ್ರಚಾರ ಸಂಘದ ವಿಜಯ ಪ್ರಥಮ ಕಾಲೇಜು ಮತ್ತು ವಿಜಯ ಶಿಕ್ಷಣ ಮಹಾವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ಎನ್‌ಎಸ್‌ಎಸ್ ಘಟಕ, ಎಸ್‌ಟಿಜಿ ಪ್ರಥಮ ಕಾಲೇಜು ಚಿನಕುರಳಿ, ಪ್ರಥಮ ದರ್ಜೆ ಕಾಲೇಜುಗಳು ಇತಿಹಾಸ ಅಧ್ಯಾಪಕರ ಸಂಘ ಮತ್ತು ಬಿ.ಇಡಿ ಕಾಲೇಜಿನ ಅಧ್ಯಾಪಕರ ಸಂಘ, ಮಂಡ್ಯ ವಿ.ವಿ ಪ್ರಾಯೋಜಕತ್ವದಲ್ಲಿ ಸೋಮವಾರ ನಡೆದ ‘ಮರಳಿ ಮನಕೆ–ಗಾಂಧಿ ಮತ್ತು ನಾಲ್ವಡಿ ಕೃಷ್ಙರಾಜ ಒಡೆಯರ್ ಅವರ ಚಿಂತನೆಗಳ ಪ್ರಸ್ತುತಿ’ ಎಂಬ ವಿಷಯದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಫಾಟಿಸಿ ಅವರು ಮಾತನಾಡಿದರು.
‘ಭಾರತ ಸಮುದಾಯ ಸಮಾಜ ಮತ್ತು ಬಹುತ್ವ ಸಮಾಜವಾಗಿದೆ. ಇದನ್ನು ಮನಗಂಡೇ ಗಾಂಧೀಜಿ ಅವರು ಎಲ್ಲ ಜಾತಿ ಧರ್ಮೀಯರನ್ನು ಒಗ್ಗೂಡಿಸವ ಕೆಲಸ ಮಾಡಿದರು. ಗಾಂಧೀಜಿಯವರ ನೈತಿನಕತೆಯನ್ನು ಯಾರು ಪ್ರಶ್ನೆ ಮಾಡಲಾಗುವುದಿಲ್ಲ. ಅವರ ಜೀವನವೇ ತೆರೆದ ಪುಸ್ತಕ ಮತ್ತು ಸಂದೇಶವಾಗಿದೆ’ ಎಂದರು.
ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಶೋಷಿತ ಸಮುದಾಯದ ದನಿಯಾಗಿದ್ದರು. ಮೈಸೂರು ಪ್ರಾಂತ್ಯದ ಸಮಗ್ರ ಅಭಿವೃದ್ದಿಪಡಿಸುವಲ್ಲಿ ನಾಲ್ವಡಿ ಅವರ ಪರಿಶ್ರಮವನ್ನು ನಾಡಿನ ಜನತೆ ಮರೆಯುವಾಗಿಲ್ಲ. ದೇಶದಲ್ಲಿಯೇ ಮೈಸೂರು ರಾಜ್ಯ ಮಾದರಿಯಾಗಿದೆ ಎಂದು ಗಾಂಧೀಜಿಯವರೇ ಪ್ರಶಂಸಿದ್ದರು ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಪ್ರಚಾರ ಸಂಘ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ ಆಶಯ ನುಡಿಗಳನ್ನಾಡಿದರು. ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯ ಕಾರ್ಯದರ್ಶಿ ಸರೋಜಮ್ಮ ತುಳಸಿದಾಸ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌ.ಕಾರ್ಯದರ್ಶಿ ಎಂ.ಸಿ.ನರೇಂದ್ರ, ಮಂಡ್ಯ ವಿ.ವಿ.ಯ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಎಂ.ಬಿ.ಪ್ರಮೀಳಾ ಇದ್ದರು.
‘ಮತವನ್ನು ಅಪವಿತ್ರಗೊಳಿಸಿದ ರಾಜಕಾರಣಿಗಳು
’ ‘ದೇಶದ ಸಂಸದರಲ್ಲಿ ಶೇ 47ರಷ್ಟು ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇಂದಿನ ರಾಜಕಾರಣಿಗಳು ಮತದಾರರನ್ನು ಭ್ರಷ್ಟರಾಗಿಸಿ ಮತವನ್ನು ಅಪವಿತ್ರಗೊಳಿಸಿದ್ದಾರೆ. ತತ್ವರಹಿತ ರಾಜಕಾರಣ ಸಾಮಾಜಿಕ ಪಾಪ ಎಂದು ಗಾಂಧೀಜಿ ಹೇಳಿದ್ದಾರೆ. ಸಮಾಜವನ್ನು ಒಡೆಯುವ ಶಕ್ತಿಗಳ ವಿರುದ್ದ ದನಿಎತ್ತಬೇಕಾಗಿದೆ. ಭಾರತಕ್ಕಷ್ಟೆ ಅಲ್ಲ. ವಿಶ್ವದ ನಾಯಕ ಎಂದು ಜಗತ್ತಿನ ಎಲ್ಲ ನಾಯಕರು ಒಪ್ಪಿಕೊಂಡಿದ್ದಾರೆ. ಇಂತಹ ಗಾಂಧೀಜಿಯವರನ್ನು ಮುಕ್ತಮನಸ್ಸಿನಿಂದ ಅಧ್ಯಯನ ನಡೆಸಬೇಕಿದೆ. ವಿದ್ಯಾರ್ಥಿ ಯುವಜನರು ಗಾಂಧಿಯವರನ್ನು ಓದಬೇಕಿದೆ’ ಎಂದರು.