ADVERTISEMENT

ಕೆಆರ್‌ಎಸ್ ನೀರನ್ನು 25 ದಿನ ಹರಿಸುವಂತೆ ಒತ್ತಾಯ

ಒಣಗಿದ ಬೆಳೆಗಳಿಗೆ ಶೀಘ್ರವೇ ಪರಿಹಾರ ಬಿಡುಗಡೆ ಮಾಡಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 13:21 IST
Last Updated 22 ಜುಲೈ 2019, 13:21 IST
ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ಸೋಮವಾರ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ  ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು
ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ಸೋಮವಾರ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ  ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು   

ಮಂಡ್ಯ: ಕೆಆರ್‌ಎಸ್ ನೀರನ್ನು 25 ದಿನಗಳವರೆಗೆ ನಾಲೆಗೆ ಹರಿಸಬೇಕು ಹಾಗೂ ಒಣಗಿರುವ ಬೆಳೆಗೆ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

39ನೇ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿದ ಕಾರ್ಯಕರ್ತರು ಶಾಸಕರು ರೆಸಾರ್ಟ್‌ ರಾಜಕಾರಣ ಬಿಟ್ಟು ಕೂಡಲೇ ಮತ ಹಾಕಿದ ಪ್ರಜೆಗಳ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ನಿಮ್ಮನ್ನು ಹಳ್ಳಿಗೆ ಕಾಲಿಡಲು ಬಿಡದಂತೆ ಘೇರಾವ್ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸತತ ಬರಗಾಲ ಬಿದ್ದಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಸುರಿದಿದ್ದ ಮಳೆ ಹಾಗೂ ಕೆಆರ್‌ಎಸ್ ನೀರು ನಂಬಿಕೊಂಡು ಬೆಳೆ ಹಾಕಿದ್ದರು. ಆದರೆ ಸರಿಯಾದ ಸಮಯಕ್ಕೆ ನೀರು ಹರಿಸದ್ದರಿಂದ ಬೆಳೆ ಒಣಗಿ ಹೋಗಿದೆ. ಒಣಗಿರುವ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿ ಪಾವತಿಯ ಜೊತೆಗೆ ಕೂಡಲೆ ಸಕ್ಕರೆ ಕಾರ್ಖಾನೆ ಆರಂಭ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಬ್ಬು, ರೇಷ್ಮೆ, ಬಾಳೆ ಸೇರಿ ಎಲ್ಲಾ ಬೆಳೆಗಳಿಗೆ ಡಾ.ಸ್ವಾಮಿನಾಥನ್ ವರದಿ ಶಿಫಾರಸು ಅನ್ವಯ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ರೈತ ವಿರೋಧಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಕೈಬಿಡಬೇಕು. ಹಾಲಿನ ದರವನ್ನು ₹ 30ಕ್ಕೆ ನಿಗದಿ ಮಾಡಬೇಕು. ಕೆ.ಜಿ ರೇಷ್ಮೆಗೂಡಿಗೆ ₹ 50 ಪ್ರೋತ್ಸಾಹಧನ ಹೆಚ್ಚಿಸಬೇಕು. ಅಕ್ರಮ ಗಣಿಗಾರಿಕೆ ತಡೆದು ರೈತರನ್ನು ಹಾಗೂ ಜಿಲ್ಲೆಯ ಸಂಪತ್ತನ್ನು ಉಳಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಹೆಮ್ಮಿಗೆ ಚಂದ್ರಶೇಖರ್, ಸಿ.ಸ್ವಾಮಿಗೌಡ, ಇಂಡುವಾಳು ಬಸವರಾಜು, ಕೆ.ನಾಗೇಂದ್ರ, ಕೆ.ರಾಮಲಿಂಗೇಗೌಡ, ಸೊ.ಶಿ.ಪ್ರಕಾಶ್, ಕೆ.ಜಿ.ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.