ಪ್ರಾತಿನಿಧಿಕ ಚಿತ್ರ
ಮಳವಳ್ಳಿ: ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-948(209) ಕಾಮಗಾರಿಯು ಅಪೂರ್ಣಗೊಂಡಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರಾಂತ ಸಂಘ ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದೆ.
‘ಕಾಮಗಾರಿಯು ಅಪೂರ್ಣಗೊಂಡಿರುವುದರ ಜೊತೆಗೆ ಕಳಪೆ ಗುಣಮಟ್ಟದಿಂದ ಕೂಡಿದೆ. ಕಳೆದ ತಿಂಗಳು ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾಗ ಪ್ರತಿಭಟನೆ ನಡೆಸಿ ಹಲವು ಸಮಸ್ಯೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದವು. ಇದೀಗ ಅವುಗಳನ್ನು ಬಗೆಹರಿಸುವ ಮುನ್ನವೇ ಟೋಲ್ ಸಂಗ್ರಹ ಸರಿಯಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಸಂಚಾಲಕ ಎನ್.ಎಲ್.ಭರತ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದರು.
‘ಹಲವು ಕಡೆ ಅವೈಜ್ಞಾನಿಕವಾಗಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಿ ಗಾಳಿ, ಮಳೆಯಿಂದ ರಕ್ಷಣೆ ಇಲ್ಲದಂತಾಗಿದೆ. ಅಲ್ಲದೇ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸರಿಯಾಗಿ ಇಲ್ಲ, ತಾಲ್ಲೂಕಿನ ಜನರ ವಾಹನಗಳ ಮುಕ್ತ ಓಡಾಡದ ಬಗ್ಗೆ ಸ್ಪಷ್ಟತೆ ನೀಡಿಲ್ಲ, ಜೊತೆಗೆ ಸರ್ವಿಸ್ ರಸ್ತೆ ನಿರ್ಮಿಸದೇ ಜನರನ್ನು ರಾಷ್ಟ್ರೀಯ ಹೆದ್ದಾರಿ ವಂಚಿಸುತ್ತಿದೆ’ ಎಂದು ಆರೋಪಿಸಿದರು.
‘ಹೊಸಹಳ್ಳಿ ಭಾಗದ ರೈತರ ಜಮೀನುಗಳಿದ್ದ ಮಾರ್ಗವನ್ನು ಬಂದ್ ಮಾಡಿ ಐದಾರು ಕಿಲೋ ಮೀಟರ್ ಸುತ್ತಿಕೊಂಡು ಬರುವ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ. ಮದ್ದೂರು-ಕುಣಿಗಲ್-ತುಮಕೂರು ರಾಜ್ಯ ರಸ್ತೆಯ ಕಾಮಗಾರಿಯು ಸಹ ಗುಣಮಟ್ಟದಿಂದ ಕೂಡಿಲ್ಲ, ಇಂಥ ಹಲವು ನ್ಯೂನತೆಗಳಿದ್ದರೂ ಏಕಾಏಕಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಸರಿಯಲ್ಲ, ಕೂಡಲೇ ಸುಂಕ ಸಂಗ್ರಹ ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಎನ್.ಲಿಂಗರಾಜಮೂರ್ತಿ, ನಂಜುಂಡಸ್ವಾಮಿ, ಮರಿಲಿಂಗೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.