ಕೆ.ಆರ್.ಪೇಟೆ: ಪಟ್ಟಣದ ಮಿನಿವಿಧಾನಸೌಧದ ಆವರಣ ಸೋಮವಾರ ಹಸಿರುಮಯವಾಗಿತ್ತು. ತಾಲ್ಲೂಕಿನ ವಿವಿಧೆಡೆಯಿಂದ ಹಸಿರು ಟವಲ್ ಹೊದ್ದು ಬಂದ ರೈತರು ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಖಂಡಿಸಿದರು.
‘ತಾಲ್ಲೂಕು ಕಚೇರಿ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ದೂರಿದರು.
ಮುಖಂಡ ಮುದುಗೆರೆ ರಾಜೇಗೌಡ, ‘ಗೋಮಾಳದ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಲಿಖಿತ ದೂರು ನೀಡಿದರೂ ತಹಶೀಲ್ದಾರರು ಗಮನಹರಿಸಿಲ್ಲ. ಸರ್ಕಾರದ ಆಸ್ತಿ ಸಂರಕ್ಷಿಸಬೇಕಾದ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ’ ಎಂದರು.
‘ಪಟ್ಟಣದ ಎಪಿಎಂಸಿ ಆವರಣದಲ್ಲಿನ 0.19 ಗುಂಟೆ ಜಮೀನನ್ನು ಖಾಸಗಿಯವರಿಗೆ ಖಾತೆ ಮಾಡಿಕೊಡಲಾಗಿದೆ. ತೇಗನಹಳ್ಳಿಯಲ್ಲಿ ಪ್ರಭಾವಿಯೊಬ್ಬರು ಸರ್ವೆ ನಂ–77ರ ಗೋಮಾಳದಲ್ಲಿನ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿ ರೆಸಾರ್ಟ್ ಮಾಡಿದ್ದಾರೆ. ಆದರೂ ಕ್ರಮ ವಹಿಸಿಲ್ಲ’ ಎಂದು ಆರೋಪಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂದಗೆರೆ ಜಯರಾಮು, ‘ಕಾವೇರಿ ನೀರಾವರಿ ನಿಗಮದಿಂದ ವಿತರಣಾ ನಾಲೆ–54ರಲ್ಲಿ ನಡೆದಿರುವ ಆಧುನಿಕ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿಗೆ ಮುನ್ನವೇ ಹಣ ಡ್ರಾ ಮಾಡಲಾಗಿದೆ. ಹೇಮಾವತಿ ಎಡದಂಡೆ( ಸಾಹುಕಾರ್ ಚೆನ್ನಯ್ಯ ನಾಲೆ) ಆಧುನೀಕರಣ ಕಾಮಗಾರಿ ಅವ್ಯವಹಾರದಿಂದ ಕೂಡಿದೆ. ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಸಂಘದ ಆರೋಪದ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸಲಾಗುವದು’ ಎಂದು ತಹಶೀಲ್ದಾರ್ ಯು.ಎಸ್. ಅಶೋಕ್ ಭರವಸೆ ನೀಡಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮುಖಂಡರಾದ ಕರೋಟಿ ತಮ್ಮಯ್ಯ, ಮರುವಿನಹಳ್ಳಿ ಶಂಕರ್, ಬೂಕನಕೆರೆ ನಾಗರಾಜು, ಲಕ್ಷ್ಮೀಪುರ ಜಗದೀಶ್, ಚೌಡೇನಹಳ್ಳಿ ಕೃಷ್ಣೇಗೌಡ, ಕಾಗೇಪುರ ಮಹೇಶ್, ಜಯಣ್ಣ, ಆನೆಗೊಳ ಮಂಜು, ನಗರೂರು ಕುಮಾರ್, ಕುಂದನಹಳ್ಳಿ ಪ್ರಭಾಕರ್, ಮರುನಹಳ್ಳಿ ಮಹೇಶ್, ರಾಮನಹಳ್ಳಿ ಮಂಜು, ತೆಂಗಿನ ಘಟ್ಟ ಮಂಜು, ಅಜಯ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.