
ಮಳವಳ್ಳಿ: ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸದ 6ನೇ ದಿನವಾದ ಭಾನುವಾರ ಆದಿಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಸದ್ಭಾವನಾ ಬೃಹತ್ ಮೆರವಣಿಗೆಗೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು.
ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಉತ್ಸವದಲ್ಲಿ ನಂದಿ ಕಂಭಗಳಿಗೆ ಹಾಗೂ ಆದಿಜಗದ್ಗುರುಗಳ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಶ್ರೀಮಠದ ಸಕಲ ಬಿರುದಾವಳಿಗಳು, ಪೂರ್ಣಕುಂಭ, ಮಂಗಳವಾದ್ಯ, ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಜಯಂತ್ಯುತ್ಸವದಲ್ಲಿ ಶಾಂತಿ, ಸೌಹಾರ್ದ, ಸಾಮರಸ್ಯ ಸಾರುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿತು.
ಉತ್ಸವ ಮೂರ್ತಿಯ ಬೆಳ್ಳಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸುತ್ತೂರು ಗುರು ಪರಂಪರೆಯ ಸಂಪ್ರದಾಯಬದ್ಧ ಆಚರಣೆಗಳು ಮೇಳೈಸಿದವು. ಮೆರವಣಿಗೆಯಲ್ಲಿ ಹರಗುರು ಚರಮೂರ್ತಿಗಳು, ಸರ್ವ ಜನಾಂಗದ ನೂರಾರು ಜನರು, ವಿದ್ಯಾಪೀಠದ ಅಧಿಕಾರಿಗಳು, ಜಯಂತಿ ಮಹೋತ್ಸವದ ಸಮಿತಿಯ ಪದಾಧಿಕಾರಿಗಳು ಸೇರಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಶಾಂತಿ ಕಾಲೇಜು ಮುಂಭಾಗದ ಅನುಭವ ಮಂಟಪದಿಂದ ಹೊರಟ ಮೆರವಣಿಗೆಯು ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯ ಮೂಲಕ ಅನಂತ್ ರಾಂ ವೃತ್ತ, ಕುಪ್ಪಸ್ವಾಮಿ ಅಯ್ಯಂಗಾರ್ ವೃತ್ತ, ಸುಲ್ತಾನ್ ರಸ್ತೆ, ಅನಿತಾ ಕಾನ್ವೆಂಟ್ ರಸ್ತೆಯ ಮೂಲಕ ಜಯಂತ್ಯುತ್ಸವದ ವೇದಿಕೆ ಬಳಿ ಆಗಮಿಸಿತು.
ಜಿಲ್ಲಾಧಿಕಾರಿ ಕುಮಾರ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಕೆ.ಅನ್ನದಾನಿ, ಬಾಲರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.