ಮದ್ದೂರು: ಪಟ್ಟಣದ ಹೊಳೇಬೀದಿಯಲ್ಲಿರುವ ಚಿಕ್ಕಸವದತ್ತಿ ಎಂದೇ ಪ್ರಸಿದ್ಧಿ ಪಡೆದಿರುವ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಸಂಭ್ರಮದಿಂದ ನಡೆಯಿತು.
ಶುಕ್ರವಾರದಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು. ಸಂಜೆ ಮೂಲದೇವರಿಗೆ ಅನುಜ್ಞೆ, ಗಣಪತಿ ಪೂಜೆ, ಭೂಶಾಂತಿ, ಗಂಗಾ ಪೂಜೆ, ಸ್ವಸ್ತಿವಾಚನ, ದೇವನಾಂದಿ, ಪಂಚಗವ್ಯಾರಾಧನೆ ಸೇರಿದಂತೆ ಹಲ ವಾರು ಪೂಜಾ ವಿಧಾನಗಳು ನಡೆದವು.
1972ರಲ್ಲಿ ಮದ್ದೂರು ಪಟ್ಟಣದ ಶಿಂಷಾ ನದಿಯ ದಡದಲ್ಲಿ ರೇಣುಕಾ ಎಲ್ಲಮ್ಮ ದೇವಿಯವರ ದೇವಸ್ಥಾನ ನಿಮಿಸಲಾಯಿತು. ಸುಮಾರು 46 ವರ್ಷಗಳಿಂದ ಜಾತ್ರಾ ಮಹೋತ್ಸವವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿಯೂ ಅಚ್ಚುಕಟ್ಟಾಗಿ ನಡೆಯಿತು.
ಮಾಘ ಹುಣ್ಣಿಮೆಯ ದಿನವಾದ ಶನಿವಾರ ನಡೆದ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾ ನವನ್ನು ಬಗೆ ಬಗೆ ಹೂವಿನಿಂದ ಅಲಂಕಾರ ಮಾಡಲಾಗಿತ್ತು, ತಳಿರು ತೋರಣಗಳಿಂದ ಸಿಂಗಾರಿಸಾಗಿತ್ತು. ದೇವಿಯ ವಿಗ್ರಹಕ್ಕೆ ಹೂವು ಹಾಗೂ ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆ 7ರಿಂದ ದೇವಸ್ಥಾನದ ಆವರಣದಲ್ಲಿ ಹೋಮ ನಡೆಯಿತು. 11ಕ್ಕೆ ಪೂರ್ಣಾಹುತಿ, 12ಕ್ಕೆ ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ಹಾಗೂ ತಂಬಿಟ್ಟಿನಾರತಿ ನಡೆಯಿತು.
ಮಧ್ಯಾಹ್ನ 1 ರಿಂದ 4.30ರವರೆಗೆ ಅನ್ನಸಂತರ್ಪಣೆ ನಡೆಯಿತು. ಪಟ್ಟಣ, ತಾಲ್ಲೂಕಿನ ಹಲವು ಕಡೆಗಳಿಂದ ಹಾಗೂ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ದೇವಿಯ ದರ್ಶನ ಪಡೆದರು.
ರಾತ್ರಿ 8ಕ್ಕೆ ಪಟ್ಟಣದ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು. ರಾತ್ರಿಯಿಡೀ ನಡೆದ ಮುತ್ತಿನ ಮೆರವಣಿಗೆಯು ಪಟ್ಟಣದ ಹೊಳೆಬೀದಿ, ಒಕ್ಕಲಗೇರಿ ಬೀದಿ, ದೊಡ್ಡಿಬೀದಿ, ಸೋಮೇಗೌಡರ ಬೀದಿ, ಪೇಟೆ ಬೀದಿ, ಗಂಗಾಮತಸ್ಥರ ಬೀದಿ, ಮೇಗಳದೊಡ್ಡಿ ಬೀದಿ ಸೇರಿದಂತೆ ಹಲವು ಬೀದಿಗಳಲ್ಲಿ ಸಾಗಿತು.
ಈ ವೇಳೆ ಆಂಧ್ರದ ಹೆಸರಾಂತ ತಿರುಪತಿ ತಿರುಮಲ ದೇವಸ್ಥಾನದ ಬಾಲಾಜಿ ವಾದ್ಯಗೋಷ್ಠಿಯವರಿಂದ ವಾದ್ಯಗೋಷ್ಠಿ, ಗ್ರಾಮದೇವತೆ ಮದ್ದೂರಮ್ಮ, ದಂಡಿನಮಾರಮ್ಮರ ಪೂಜಾಕುಣಿತ, ಕೇರಳದ ಕಲಾವಿ ದರಿಂದ ಚಂಡ ಮದ್ದಳೆ, ತಮಿಳುನಾಡು ಬ್ಯಾಂಡ್‌ಸೆಟ್, ಕಲಾವಿದರಿಂದ ತಮಟೆ ವಾದನ ಸೇರಿದಂತೆ ಹಲವಾರು ಪೂಜಾ ಕುಣಿತ ಕಾರ್ಯಕ್ರಮಗಳು ನಡೆದವು.
ಮೆರವಣಿಗೆ ವೇಳೆ ಪಟ್ಟಣದ ಬೀದಿಗಳಲ್ಲಿ ಮಹಿಳೆಯರು ಮನೆಗಳ ಮುಂದೆ ಆರತಿ ಎತ್ತಿ ದೇವಿಗೆ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.