ADVERTISEMENT

ಮಳವಳ್ಳಿ: ಗಗನಚುಕ್ಕಿ ಅಭಿವೃದ್ಧಿ ಕಾಮಗಾರಿ ಆಮೆಗತಿ, ಪ್ರವಾಸಿಗರಿಗೆ ಕಿರಿಕಿರಿ

ಸೌಲಭ್ಯವಂಚಿತ ಪ್ರವಾಸಿ ತಾಣ, ಮಂದಗತಿಯಲ್ಲಿ ಸಾಗಿದ ಅಭಿವೃದ್ಧಿ ಕೆಲಸ, ಪ್ರವಾಸಿಗರಿಂದ ತೀವ್ರ ಆಕ್ಷೇಪ

ಟಿ.ಕೆ.ಲಿಂಗರಾಜು
Published 19 ಆಗಸ್ಟ್ 2023, 7:51 IST
Last Updated 19 ಆಗಸ್ಟ್ 2023, 7:51 IST
ಕೃಷ್ಣರಾಜ ಸಾಗರ ಜಲಾಶಯದಿಂದ ನೀರು ಹರಿದು ಬರುತ್ತಿರುವ ಕಾರಣ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ
ಕೃಷ್ಣರಾಜ ಸಾಗರ ಜಲಾಶಯದಿಂದ ನೀರು ಹರಿದು ಬರುತ್ತಿರುವ ಕಾರಣ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ   

ಮಳವಳ್ಳಿ: ಪ್ರಕೃತಿಯ ಮಧ್ಯೆ ನೂರಾರು ಅಡಿ ಎತ್ತರದ ಪ್ರದೇಶದಿಂದ ಧುಮ್ಮಿಕ್ಕುವ ದೃಶ್ಯ ವೈಭವ ಕಣ್ಣಿಗೆ ಕಟ್ಟುತ್ತದೆ. ಮಳೆಗಾಲ ಆರಂಭವಾಯಿತೆಂದರೆ ಸುಪ್ರಸಿದ್ಧ ಈ ಗಗನಚುಕ್ಕಿ ಜಲಪಾತ ನೋಡಲು ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಆದರೆ ಜಲಪಾತ ಸ್ಥಳದಲ್ಲಿ ಸೌಲಭ್ಯಗಳಿಲ್ಲದ ಕಾರಣ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಾರೆ.

ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಯುತ್ತಿರುವ ಕಾರಣ ಶಿವನಸಮುದ್ರ, ಗಗನಚುಕ್ಕಿ ಜಲಪಾತ ಸೌಂದರ್ಯ ನೋಡಲು ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಪ್ರಕೃತಿ ಸೌಂದರ್ಯ ವೀಕ್ಷಿಸಲು ಕುಳಿತುಕೊಳ್ಳಲೂ ಸರಿಯಾದ ಜಾಗವಿಲ್ಲ.  ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಕುಂಟತ್ತಾ ಸಾಗುತ್ತಿದೆ.

ಸಾವಿರಕ್ಕೂ ಅಧಿಕ ಮಂದಿ ಕುಳಿತು ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 2021ರಲ್ಲಿ ₹ 3.90 ಕೋಟಿ ವೆಚ್ಚದಲ್ಲಿ ಮೆಟ್ಟಿಲು ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಸೂಚನೆ ನೀಡಿತ್ತು. ಆದರೆ ಜವಾಬ್ದಾರಿ ಹೊತ್ತ ಬೆಂಗಳೂರು ಮೂಲದ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ADVERTISEMENT

ಇದ್ದರಿಂದ ಜಲಪಾತ ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಅಪಾಯ ಎದುರಾಗಿದೆ, ಹಿಂದೆ ಇದ್ದ ಮೆಟ್ಟಲುಗಳ ಕಂಬಿಯನ್ನು ಕಿತ್ತು ಹಾಕಿರುವುದರಿಂದ ಬಹಳ ಸೂಕ್ಷ್ಮವಾಗಿ, ಎಚ್ಚರಿಕೆಯಿಂದ ವೀಕ್ಷಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆ ಇಲ್ಲದೇ ಸೊರಗಿದ ಗಗನಚುಕ್ಕಿ ಜಲಪಾತಕ್ಕೆ ಕಳೆದ ತಿಂಗಳು ಕಾವೇರಿ ಕೊಳದಲ್ಲಿ ಸುರಿದ ಮಳೆಯಿಂದ ಮತ್ತೆ ಜೀವ ಕಳೆಬಂದಿತ್ತು. ಅಲ್ಲದೇ ಜಿಲ್ಲೆಯ ರೈತರ ವಿರೋಧದ ನಡುವೆಯೂ ಕೃಷ್ಣರಾಜ ಸಾಗರ ಜಲಾಶಯದಿಂದ 11 ಸಾವಿರ ಕ್ಯುಸೆಕ್‌ ಅಧಿಕ ನೀರನ್ನು ನದಿಗೆ ಹರಿದು ಬಿಡುತ್ತಿರುವುದರಿಂದ ಮತ್ತೆ ಇದೀಗ ಗಗನಚುಕ್ಕಿ ಜಲಪಾತ ಮೈದುಂಬಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಇಲ್ಲಿಯವರೆಗೆ ಶೇ40ರಷ್ಟು ಮಾತ್ರ ಕಾಮಗಾರಿ ನಡೆದಿದ್ದು, ಕಳೆದ ಆರು ತಿಂಗಳಿಂದ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಎರಡು ದಿನಗಳಿಂದ ಮತ್ತೆ ಕಾಮಗಾರಿಯನ್ನು ಆರಂಭಿಸಲಾಗಿದ್ದರೂ ಕಾಮಗಾರಿಗೆ ವೇಗ ನೀಡಿಲ್ಲ, ನಾನಾ ಕುಂಟು ನೆಪಗಳನ್ನು ಹೇಳುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಕ್ತ ಕ್ರಮ ವಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಜಲಪಾತದ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಹೊಸ ಯೋಜನೆ ರೂಪಿಸಲಾಗುವುದು’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಗಗನಚುಕ್ಕಿ ಜಲಪಾತದ ಬಳಿ ಮಂದಗತಿಯಲ್ಲಿ ಸಾಗಿರುವ ಮೆಟ್ಟಿಲು ತಡೆಗೋಡೆ ಕಾಮಗಾರಿ

4 ಬಾರಿ ನೋಟಿಸ್‌

‘ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಸಂಬಂಧ ಈಗಾಗಲೇ ಗುತ್ತಿಗೆದಾರರಿಗೆ ನಾಲ್ಕು ಬಾರಿ ನೋಟಿಸ್‌ ನೀಡಲಾಗಿದೆ. ವಿಳಂಬ ಧೋರಣೆ ಮುಂದುವರಿದರೆ ಟೆಂಡರ್ ರದ್ದು ಮಾಡಿ ಮರು ಟೆಂಡರ್ ಕರೆದು ಬೇರೆಯವರಿಗೆ ಜವಾಬ್ದಾರಿ ನೀಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರೀಶ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.