ಮಂಡ್ಯ: ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಗೌರಿ ಹಬ್ಬ ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮತ್ತೊಂದೆಡೆ ಗೌರಿ, ಗಣೇಶ ಮೂರ್ತಿಯನ್ನು ಸಾರ್ವಜನಿಕರು ಖರೀದಿ ಮಾಡಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.
ಮಂಗಳವಾರ ಗೌರಿ ಹಬ್ಬದ ಭಾಗವಾಗಿ ಬೆಳಗ್ಗಿನಿಂದಲೇ ಮಹಿಳೆಯರು ದೇವಾಲಯಗಳು, ಸಾರ್ವಜನಿಕ ಸ್ಥಳಗಳಲ್ಲಿನ ಗೌರಿ ಪ್ರತಿಷ್ಠಾಪನೆ ಬಳಿ ತೆರಳಿ ಬಾಗಿನ ಅರ್ಪಿಸಿದರು. ಆ ಮೂಲಕ ಪ್ರಥಮ ಪೂಜೆ ಸಲ್ಲಿಸಿ ಭಕ್ತಿ ತೋರಿದರು.
ಗೌರಿ ಮಾತೆಗೆ ಅರಿಶಿನ-ಕುಂಕುಮ, ಬಳೆ, ರವಿಕೆ ಕಣ, ಬಿಚ್ಚೋಲೆ ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಸುಮಂಗಲಿಯರು ಪರಸ್ಪರ ತಾಂಬೂಲ ಹಾಗೂ ಬಳೆ ವಿನಿಮಯ ಮಾಡಿಕೊಂಡರು.
ಖರೀದಿ ಭರಾಟೆ ಜೋರು: ಹಬ್ಬ ಆಚರಿಸಲು ಸಿದ್ಧತೆ ನಡೆಸಿರುವ ಗೌರಿ ಹಬ್ಬದ ದಿನವಾದ ಮಂಗಳವಾರವೂ ಜನರು, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ನಗರದ ಮಾರುಕಟ್ಟೆ ಪ್ರದೇಶ ಮತ್ತು ಪ್ರಮುಖ ರಸ್ತೆಗಳು ಫುಲ್ ಜನಜಂಗುಳಿಯಿಂದ ತುಂಬಿದ್ದವು. ಮಾರುಕಟ್ಟೆ, ಪೇಟೆಬೀದಿ, ವಿ.ವಿ.ರಸ್ತೆ, ನೂರಡಿ ರಸ್ತೆ, ಹೊಸಹಳ್ಳಿ ಸರ್ಕಲ್, ಗುತ್ತಲು ರಸ್ತೆ, ಎಪಿಎಂಸಿ ಸರ್ಕಲ್, ಹೊಳಲು ಸರ್ಕಲ್‌ನಲ್ಲಿ ಹಬ್ಬದ ಸಾಮಾಗ್ರಿ ಖರೀದಿ ಭರಾಟೆ ಜೋರಾಗಿಯೇ ನಡೆದಿತ್ತು.
ಗೌರಿ ಗಣೇಶ ವಿಗ್ರಹ ಖರೀದಿ: ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸರ್ಕಾರವು ಕಾನೂನು ಬಿಗಿಗೊಳಿಸಿದೆ. ಹಾಗಾಗಿ ಮೊದಲಿನಷ್ಟು ಉತ್ಸಾಹ ಯುವಕರಲ್ಲಿ ಇಲ್ಲವಾಗಿತ್ತು, ಆದರೂ ಯುವಕರು ಮತ್ತು ಮಕ್ಕಳು ಗಣೇಶನ ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪಿಸುವುದಕ್ಕೆ ಉತ್ಸುಕರಾಗಿರುವುದು ಕಂಡು ಬಂದಿತು.
ಅದರಂತೆ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ವಿವಿಧ ಆಕಾರದ ಹಾಗೂ ಬಣ್ಣ ಬಣ್ಣದ ಗೌರಿ ಗಣೇಶ ಮೂರ್ತಿಗಳನ್ನು ಆಕಾರದ ವಿಗ್ರಹಗಳು ಗಮನ ಸೆಳೆಯುತ್ತಿದ್ದವು. ಯುವಕರು ಚೌಕಾಸಿ ವ್ಯಾಪಾರ ಮಾಡಿ ಮೂರ್ತಿಗಳನ್ನು ಖರೀದಿಸುವ ದೃಶ್ಯಗಳು ಕಂಡುಬಂದವು. ಒಟ್ಟಾರೆ ₹800 ರಿಂದ ₹8 ಸಾವಿರದ ವರೆಗೂ ಮಾರಾಟ ಮಾಡಲಾಗುತ್ತಿತ್ತು.
ಹೂ ಹಣ್ಣಿನ ಬೆಲೆ ದುಬಾರಿ:
ಕಣಗಲೆ ಸೇವಂತಿಗೆ ಮರಳೆ ₹100 ಕಾಕಡ ₹150 ಕನಕಾಂಬರ ₹200 ಮಲ್ಲಿಗೆ ₹300 ರಂತೆ ಒಂದು ಮಾರಿಗೆ ಮಾರಾಟವಾಗುತ್ತಿತ್ತು. ಹೂವಿನ ಹಾರಗಳ ಬೆಲೆ ₹100 ರಿಂದ ₹1500 ವರೆಗೂ ಮಾರಾಟವಾಗುತ್ತಿದ್ದವು. ಸೀತಾಫಲ ಅನಾನಸ್ ₹50 ಮೂಸಂಬಿ ₹80 ಕಿತ್ತಳೆ ಬಾಳೆ ಹಣ್ಣು ಮರಸೇಬು ಸೀಬೆ ₹100 ದಾಳಿಂಬೆ ದ್ರಾಕ್ಷಿ ₹160 ಸೇಬು ದ್ರಾಕ್ಷಿ ₹200 ದಾಳಿಂಬೆ ₹250 ರಂತೆ ಕೆಜಿಗೆ ಮಾರಾಟ ಮಾಡಲಾಗುತ್ತಿತ್ತು. ಸೊಪ್ಪು ತರಕಾರಿ ಬೆಲೆ ಏರಿಕೆ: ಸೊಪ್ಪು ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಬೆಂಡೆಕಾಯಿ ಮೂಲಂಗಿ ₹40 ಬೀನ್ಸ್ ಗಡ್ಡೆಕೋಸು ಕ್ಯಾರೇಟ್ ಬೀಟ್‌ರೂಟ್ ₹60 ರಂತೆ ಕೆಜಿಗೆ ಮಾರಾಟವಾಗುತ್ತಿದ್ದರೆ ಕೀರೆ ₹5 ಪಾಲಕ್ ₹10 ಪುದಿನ ₹15 ಮೆಂತ್ಯಸೊಪ್ಪು ₹20 ಕೊತ್ತಂಬರಿ ಸೊಪ್ಪು ಸಬ್ಬತ್ತಿಗೆ ಸೊಪ್ಪು ₹30 ರಂತೆ ಒಂದು ಕಟ್ಟಿಗೆ ಮಾರಾಟ ಮಾಡಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.