ADVERTISEMENT

ಶುಂಠಿಗೆ ಬೆಂಬಲ ಬೆಲೆ ನೀಡಿ: ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ರೈತ ಮುಖಂಡರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 14:07 IST
Last Updated 6 ಫೆಬ್ರುವರಿ 2025, 14:07 IST
ಕಿಕ್ಕೇರಿ ಹೋಬಳಿಯ ರೈತರು ‘ಶುಂಠಿಗೆ ಬೆಂಬಲ ಬೆಲೆ ನೀಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕುಮಾರ್‌ ಅವರಿಗೆ ಮನವಿ ನೀಡಿದರು. ಮುಖಂಡರಾದ ನ್ಯಾಯಬೆಲೆ ಸೋಮಣ್ಣ, ಶ್ಯಾಮಣ್ಣ, ಸಿ. ದಯಾನಂದ, ಗೋವಿಂದ, ಶಂಭುಗೌಡ ಭಾಗವಹಿಸಿದ್ದರು
ಕಿಕ್ಕೇರಿ ಹೋಬಳಿಯ ರೈತರು ‘ಶುಂಠಿಗೆ ಬೆಂಬಲ ಬೆಲೆ ನೀಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕುಮಾರ್‌ ಅವರಿಗೆ ಮನವಿ ನೀಡಿದರು. ಮುಖಂಡರಾದ ನ್ಯಾಯಬೆಲೆ ಸೋಮಣ್ಣ, ಶ್ಯಾಮಣ್ಣ, ಸಿ. ದಯಾನಂದ, ಗೋವಿಂದ, ಶಂಭುಗೌಡ ಭಾಗವಹಿಸಿದ್ದರು   

ಕಿಕ್ಕೇರಿ: ‘ಶುಂಠಿ ಮಾರುಕಟ್ಟೆ ಬೆಲೆಯು ಪಾತಾಳಕ್ಕೆ ಕುಸಿದಿದ್ದು, ರೈತ ಕಂಗಲಾಗಿದ್ದಾನೆ. ಸರ್ಕಾರ ಮಧ್ಯ ಪ್ರವೇಶಿಸಿ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ₹7 ಸಾವಿರ ಬೆಂಬಲ ಬೆಲೆ ನೀಡಬೇಕು’ ಎಂದು ರೈತಮುಖಂಡ ಗೋವಿಂದನಹಳ್ಳಿ ನ್ಯಾಯಬೆಲೆ ಸೋಮಣ್ಣ ಆಗ್ರಹಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಅವರ ಕಚೇರಿಗೆ ಬುಧವಾರ ರೈತರ ನಿಯೋಗದೊಂದಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

‘ಕಳೆದ ಎರಡು ವರ್ಷಗಳಲ್ಲಿ ಕ್ವಿಂಟಾಲ್‌ಗೆ ₹10ರಿಂದ ₹13ಸಾವಿರವಿದ್ದ ಶುಂಠಿ ಬೆಲೆ ಪ್ರಸ್ತುತ ಕ್ವಿಂಟಾಲ್‌ಗೆ ₹1,300 ರಿಂದ ₹1,500ಕ್ಕೆ ಕುಸಿದಿದೆ. ಸಾಲ ಮಾಡಿಕೊಂಡು ಬೇಸಾಯ ಮಾಡುತ್ತಿರುವ ರೈತರ ಸಂಕಷ್ಟ ಕೇಳುವವರೇ ಇಲ್ಲದಂತಾಗಿದೆ. ಎಕರೆಗೆ ₹4 ರಿಂದ ₹5 ಲಕ್ಷ ಖರ್ಚು ಮಾಡಿ ಕೇವಲ ₹1ರಿಂದ ₹2 ಲಕ್ಷ ಪಡೆಯಬೇಕಿದೆ. ಎಕರೆಗೆ ಕನಿಷ್ಟ ₹3ಲಕ್ಷ ನಷ್ಟವಾಗುತ್ತಿದೆ’ ಎಂದರು.

ADVERTISEMENT

‘ರೈತ ಸಂಕಷ್ಟದಲ್ಲಿದಾಗ ರಕ್ಷಿಸಲು ವಿವಿಧ ಯೋಜನೆಗಳಿವೆ. 2012-13ರಲ್ಲಿ ಅರಿಶಿಣ ಬೆಲೆ ಕುಸಿದಾಗ ಎಂಐಸಿ ಯೋಜನೆ ಜಾರಿ ಮಾಡಲಾಗಿದೆ. 2016-17ರಲ್ಲಿ ಅರುಣಾಚಲ ಪ್ರದೇಶದಲ್ಲಿ ಶುಂಠಿ ಬೆಲೆ ಕುಸಿತವಾದಾಗ ಅಲ್ಲಿನ ಸರ್ಕಾರ ಎಂಐ‌ಎಸ್ ಯೋಜನೆಯಡಿಯಲ್ಲಿ ಶುಂಠಿ ಖರೀದಿಸಿದೆ. ಮಿಜೋರಾಂನಲ್ಲಿ 2024ರಲ್ಲಿ ಶುಂಠಿಗೆ ಕ್ವಿಂಟಾಲ್‌ಗೆ ₹5 ಸಾವಿರ ಬೆಂಬಲ ಬೆಲೆ ನೀಡಿದೆ. ರಾಜ್ಯದಲ್ಲೂ ಇದೇ ವ್ಯವಸ್ಥೆ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ರೈತರು ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವಾಗ ರಾಜ್ಯಸರ್ಕಾರ ಮಧ್ಯಪ್ರವೇಶಿಸಿ ಶುಂಠಿ ಖರೀದಿಸಿ ಕನಿಷ್ಟ ಕ್ವಿಂಟಾಲ್‌ಗೆ ₹7 ಸಾವಿರ ಬೆಂಬಲ ಬೆಲೆ ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದರು.

ಮುಖಂಡರಾದ ಶ್ಯಾಮಣ್ಣ, ಮಾರ್ಗೋನಹಳ್ಳಿ ಸಿ. ದಯಾನಂದ, ಗೋವಿಂದ, ಆನೆಗೊಳ ಶಂಭುಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.