ADVERTISEMENT

ಆರೋಪಿ ಮನೆಯಲ್ಲಿ ಚಿನ್ನ ತಂದಿಟ್ಟ ಪೊಲೀಸರು: ಆರೋಪ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 12:20 IST
Last Updated 28 ಡಿಸೆಂಬರ್ 2020, 12:20 IST

ಮಂಡ್ಯ: ‘ಮಹಿಳೆಯರಿಂದ ಚಿನ್ನ ಸಂಗ್ರಹಿಸಿ ವಂಚಿಸಿದ ಪ್ರಕರಣಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ. ಮಹಜರು ನೆಪದಲ್ಲಿ ಮನೆಗೆ ಬಂದಿದ್ದ ಪೊಲೀಸರು ಚಿನ್ನ, ಹಣ ತಂದಿಟ್ಟು ತನ್ನ ಮಗನ ಮೇಲೆ ಆರೋಪ ಬರುವಂತೆ ಮಾಡಿದ್ದಾರೆ’ ಎಂದು ಪ್ರಕರಣದ ಬಂಧಿತ ಆರೋಪಿ ಸೋಮಶೇಖರ್ ತಾಯಿ ತಾಯಮ್ಮ ಸೋಮವಾರ ಆರೋ‍ಪಿಸಿದರು.

‘ನಮ್ಮ ಪುತ್ರನ ಬಂಧನದ ಪೊಲೀಸರು ಮೊದಲ ಬಾರಿ ಮನೆಗೆ ಬಂದಾಗ ಅವರಿಗೆ ಯಾವುದೇ ಚಿನ್ನ, ಹಣ ಸಿಕ್ಕಿರಲಿಲ್ಲ. ಒಂದೆರಡು ದಿನಗಳ ನಂತರ ಮತ್ತೆ ಬಂದ ಪೊಲೀಸರು ಮಗನ ಕೊಠಡಿಯಲ್ಲಿ ಚಿನ್ನ, ಹಣ ಇಡುವುದನ್ನು ನೋಡಿದ್ದೇವೆ. ಅದನ್ನು ವಿಡಿಯೊ ಮಾಡಲು ತೆರಳಿದಾಗ ನಮಗೆ ಬೆದರಿಕೆ ಹಾಕಿದರು, ಮೊಬೈಲ್‌ ಕಿತ್ತುಕೊಂಡರು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಮನೆಯಲ್ಲಿ ನಾವು ಯಾವುದೇ ಚಿನ್ನ ಇಟ್ಟಿರಲಿಲ್ಲ, ಆದರೂ ಕೋಟ್ಯಂತರ ಮೌಲ್ಯದ ಚಿನ್ನ ಸಿಕ್ಕಿದೆ ಎಂದು ಆರೋಪಿಸಿ ಮಗನನ್ನು ಸಿಲುಕಿಸಿದ್ದಾರೆ. ಪೊಲೀಸರ ಕಾರ್ಯವೈಖರಿ ವಿರುದ್ಧ ದಕ್ಷಿಣ ವಲಯ ಐಜಿ ವಿಫುಲ್‌ ಕುಮಾರ್‌ ಅವರಿಗೆ ದೂರು ಸಲ್ಲಿಸುತ್ತೇನೆ’ ಎಂದರು.

ADVERTISEMENT

‘ಬಂಧಿತಳಾಗಿದ್ದ ಪ್ರಮುಖ ಆರೋಪಿ ಪೂಜಾ ಈಗಾಗಲೇ ಜಾಮೀನಿನ ಮೇಲೆ ಹೊರ ಬಂದಿದ್ದಾಳೆ. ಚಿನ್ನದ ವಹಿವಾಟು ನಡೆಸುತ್ತಿದ್ದ ಮಹಿಳೆಯರು, ಫೈನಾನ್ಸ್‌ ಸಿಬ್ಬಂದಿ ಹಾಗೂ ಪೊಲೀಸರು ನನ್ನ ಮಗನನ್ನು ಬಲಿಪಶು ಮಾಡಿದ್ದಾರೆ’ ಎಂದರು.

ಆರೋಪ ನಿರಾಕರಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ಪಂಚರ ಸಮಕ್ಷಮದಲ್ಲಿ ಮಹಜರು ಪ್ರಕ್ರಿಯೆ ನಡೆದಿರುತ್ತದೆ. ಆರೋಪದಿಂದ ತಪ್ಪಿಸಿಕೊಳ್ಳಲು ಪೊಲೀಸರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.

ಅಕ್ರಮವಾಗಿ ಚಿನ್ನ ಅಡಮಾನ ಮಾಡಿಕೊಂಡ ಆರೋಪದ ಮೇಲೆ ಖಾಸಗಿ ಫೈನಾನ್ಸ್‌ಗಳ ಇಬ್ಬರು ಸಿಬ್ಬಂದಿ ಹಾಗೂ ಚಿನ್ನ ಪರಿಶೀಲಿಸುವ ಕುಶಲಕರ್ಮಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದಕ್ಷಿಣ ವಲಯ ಐಜಿ ವಿಪುಲ್‌ ಕುಮಾರ್‌ ನಿರ್ದೇಶನದ ಮೇರೆಗೆ ತನಿಖಾ ತಂಡ ಬದಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.