ADVERTISEMENT

ಕಿರುಗಾವಲು ದರೋಡೆ ಕೇಸ್‌: ಗುಂಡು ಹಾರಿಸಿ ಪ್ರಮುಖ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 3:00 IST
Last Updated 23 ಆಗಸ್ಟ್ 2025, 3:00 IST
ಇ.ಎಸ್.ಕಿರಣ್
ಇ.ಎಸ್.ಕಿರಣ್   

ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದ್ದ ಚಿನ್ನದಂಗಡಿ ದರೋಡೆ ಮತ್ತು ಹೋಟೆಲ್ ಮಾಲೀಕನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇ.ಎಸ್.ಕಿರಣ್ (25) ಎಂಬಾತನ ಮೇಲೆ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ನೇತೃತ್ವದ ತಂಡ ಗುರುವಾರ ಮಧ್ಯರಾತ್ರಿ ಗುಂಡು ಹಾರಿಸಿ ಬಂಧಿಸಿದೆ.

ಕಾರ್ಯಾಚರಣೆಯಲ್ಲಿ ಕಿರುಗಾವಲು ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಎಚ್.ವಿ.ಶ್ರೀನಿವಾಸ್ ಗಾಯಗೊಂಡಿದ್ದಾರೆ. ಗಾಯಾಳು ಆರೋಪಿ ಹಾಗೂ ಶ್ರೀನಿವಾಸ್ ಅವರಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆ.17ರಂದು ಬೆಳಗಿನ ಜಾವ ಕಿರುಗಾವಲು ಗ್ರಾಮದ ಮುಖ್ಯರಸ್ತೆಯ ಮಹಾಲಕ್ಷ್ಮಿ ಜ್ಯುವೆಲರ್ಸ್ ಅಂಡ್ ಬ್ಯಾಂಕರ್ಸ್‌ನ ಶಟರ್ ಅನ್ನು ಗ್ಯಾಸ್ ಕಟರ್‌ನಿಂದ ತುಂಡರಿಸಿದ ಐವರ ದರೋಡೆಕೋರರ ತಂಡ 110 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ದೋಚಿತ್ತು. ಕೃತ್ಯವನ್ನು ನೋಡಿದ ಪಕ್ಕದ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ (67) ಅವರನ್ನು ದರೋಡೆಕೋರರ ತಂಡ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆ ಮಾಡಿತ್ತು.

ADVERTISEMENT

ಪ್ರಕರಣ ದಾಖಲಿಸಿಕೊಂಡಿದ್ದ ಕಿರುಗಾವಲು ಪೊಲೀಸರು ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಹಾಗೂ ಪಿಎಸ್ಐ ಡಿ.ರವಿಕುಮಾರ್ ನೇತೃತ್ವದಲ್ಲಿ ಆರೋಪಿಗಳಾದ ಕೊತ್ತತ್ತಿ ಗ್ರಾಮದ ಕೆ.ಎಂ.ಆನಂದ್ (30), ಈಚಗೆರೆ ಗ್ರಾಮದ ಕೆ.ಶರತ್ ಕುಮಾರ್ (29), ಹಟ್ಣ ಗ್ರಾಮದ ಎಚ್.ಟಿ.ಶ್ರೀನಿವಾಸ (22), ಕೀಲಾರ ಗ್ರಾಮದ ಕೃಷ್ಣಾಚಾರಿ(40) ಅನ್ನು ಬಂಧಿಸಿದ್ದರು.

ಪ್ರಕರಣದ ಪ್ರಮುಖ ಆರೋಪಿ ಈಚಗೆರೆಯ ಇ.ಎಸ್.ಕಿರಣ್ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ತಂಡ ಗುರುವಾರ ರಾತ್ರಿ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಕಿರಣ್ ಪೊಲೀಸ್ ಕಾನ್‌ಸ್ಟೆಬಲ್ ಎಚ್.ವಿ.ಶ್ರೀನಿವಾಸ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಸಿಪಿಐ ಬಿ.ಎಸ್.ಶ್ರೀಧರ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.