ADVERTISEMENT

‘ಪುಸ್ತಕ ಮನೆ’ಗೆ ಕಾಯಕಲ್ಪದ ಭರವಸೆ

ಶಾಸಕ ದಿನೇಶ್‌ ಗೂಳಿಗೌಡ ಮನವಿಗೆ ಸಚಿವ ಶಿವರಾಜ ತಂಗಡಗಿ ಸ್ಪಂದನೆ: ರ‍್ಯಾಕ್‌ ಅಳವಡಿಕೆಗೆ ಅನುದಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:16 IST
Last Updated 30 ಜನವರಿ 2026, 5:16 IST
ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ, ಪಾಂಡವಪುರದ ಪುಸ್ತಕ ಮನೆಗೆ ಅನುದಾನ ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದರು 
ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ, ಪಾಂಡವಪುರದ ಪುಸ್ತಕ ಮನೆಗೆ ಅನುದಾನ ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದರು    

ಮಂಡ್ಯ: ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಎಂ.ಅಂಕೇಗೌಡರ ಅಪರೂಪದ ಜ್ಞಾನ ಭಂಡಾರವನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ‘ಪುಸ್ತಕ ಮನೆ’ಯಲ್ಲಿರುವ ಸುಮಾರು 25 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲು ಅಗತ್ಯವಿರುವ ರ‍್ಯಾಕ್‌ಗಳ ಅಳವಡಿಕೆಗೆ ಅನುದಾನ ಮಂಜೂರು ಮಾಡುವ ಕುರಿತು ಕಡತ ಮಂಡಿಸುವಂತೆ ಅಧಿಕಾರಿಗಳಿಗೆ ಸಚಿವ ಶಿವರಾಜ ತಂಗಡಗಿ ಸೂಚಿಸಿದ್ದಾರೆ.‌

ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಗುರುವಾರ ಸಚಿವ ಶಿವರಾಜ ತಂಗಡಗಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು. ಶಾಸಕರ ಮನವಿಗೆ ತಕ್ಷಣವೇ ಸ್ಪಂದಿಸಿದ ಸಚಿವರು, ಅಗತ್ಯ ಅನುದಾನ ಮಂಜೂರು ಮಾಡಲು ಕಡತ ಮಂಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಅಂಕೇಗೌಡರು ಕಳೆದ 40 ವರ್ಷಗಳಿಂದ 25 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಪ್ರಸ್ತುತ ಈ ಪುಸ್ತಕಗಳನ್ನು ಜೋಡಿಸಿಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಪುಸ್ತಕಗಳನ್ನು ಒಂದರ ಮೇಲೊಂದು ನೆಲದಲ್ಲಿ ರಾಶಿ ಹಾಕಲಾಗಿದೆ. ಇದರಿಂದ ಮೌಲ್ಯಯುತ ಪುಸ್ತಕಗಳು ಹಾಳಾಗುವ ಆತಂಕವಿದ್ದು, ಅವುಗಳನ್ನು ಸಂರಕ್ಷಿಸಲು ಸುಸಜ್ಜಿತ ಸ್ಟೀಲ್ ರ‍್ಯಾಕ್‌ಗಳನ್ನು ಅಳವಡಿಸಲು ಇಲಾಖೆಯಿಂದ ವಿಶೇಷ ಅನುದಾನ ನೀಡಬೇಕು ಎಂದು ಶಾಸಕರು ಕೋರಿದ್ದರು.

ADVERTISEMENT

ಬಜೆಟ್‌ನಲ್ಲಿ ₹5 ಕೋಟಿಗೆ ಮನವಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಗೂಳಿಗೌಡ ಅವರು, ಮುಂಬರುವ ರಾಜ್ಯ ಆಯವ್ಯಯದಲ್ಲಿ ಅಂಕೇಗೌಡರ ಪುಸ್ತಕ ಭಂಡಾರಕ್ಕೆ ಶಾಶ್ವತ ಪರಿಹಾರ ಘೋಷಿಸುವಂತೆ ಕೋರಿದ್ದಾರೆ. ಹರಳಹಳ್ಳಿಯಲ್ಲಿ 5 ಎಕರೆ ಜಮೀನು ಮಂಜೂರು ಮಾಡುವುದು ಹಾಗೂ ಸುಸಜ್ಜಿತ ಗ್ರಂಥಾಲಯ ಸಂಕೀರ್ಣ ನಿರ್ಮಿಸಲು ₹5 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ವಿನಂತಿಸಿದ್ದಾರೆ.

ಡಿಸಿಎಂಗೆ ಕೋರಿಕೆ:

ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಗೂಳಿಗೌಡ ಮನವಿ ಸಲ್ಲಿಸಿದ್ದು, ಕಾವೇರಿ ನೀರಾವರಿ ನಿಗಮದ ವತಿಯಿಂದ ಪುಸ್ತಕ ಮನೆಗೆ ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಕೇಳಿಕೊಂಡಿದ್ದಾರೆ. 

ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ‘ಪುಸ್ತಕ ಮನೆ’ಯಲ್ಲಿ ಎಂ.ಅಂಕೇಗೌಡ ಮತ್ತು ವಿದ್ಯಾರ್ಥಿಗಳು ಪುಸ್ತಕ ಓದುತ್ತಿರುವ ದೃಶ್ಯ 

‘ಸಾಂಸ್ಕೃತಿಕ ಪ್ರವಾಸಿ ತಾಣವನ್ನಾಗಿಸಿ’

ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ಅಂಕೇಗೌಡರ ಪುಸ್ತಕ ಮನೆಯನ್ನು ಅಧಿಕೃತವಾಗಿ ‘ಗ್ರಾಮೀಣ ಸಾಂಸ್ಕೃತಿಕ ಪ್ರವಾಸಿ ತಾಣ’ ಎಂದು ಘೋಷಿಸಲು ಮನವಿ ಮಾಡಿದರು. ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿರುವ ಈ ಸ್ಥಳದಲ್ಲಿ ಸುಸಜ್ಜಿತ ವಸ್ತು ಸಂಗ್ರಹಾಲಯ ನಿರ್ಮಾಣ ಪುಸ್ತಕಗಳ ಡಿಜಿಟಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಅವರು ಕೋರಿದರು. ಈ ಮನವಿಯನ್ನು ಪುರಸ್ಕರಿಸಿದ ಸಚಿವ ಎಚ್.ಕೆ. ಪಾಟೀಲ್ ಅವರು ಶೀಘ್ರದಲ್ಲೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.