
ಮಂಡ್ಯ: ‘ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಅಧಿಕಾರಿಗಳು ತಲುಪಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾ ಕೌಶಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ನಲ್ ಜಲ್ ಮಿತ್ರ’ ಯೋಜನೆಯಡಿ 49 ಜನರು ಆಯ್ಕೆಯಾಗಿದ್ದು, 47 ಫಲಾನುಭವಿಗಳು ಉತ್ತೀರ್ಣರಾಗಿರುತ್ತಾರೆ. ಸದರಿ 47 ಜನರಿಗೆ ಟೂಲ್ ಕಿಟ್ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಗಿದೆ ಎಂದರು.
ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೇವಲ ತರಬೇತಿ ಮತ್ತು ಪ್ರಮಾಣ ಪತ್ರ ವಿತರಿಸಿದರೆ ಸಾಲದು. ಅವರಿಗೆ ಬ್ಯಾಂಕಿನ ಮೂಲಕ ಸಾಲ ಸೌಲಭ್ಯವನ್ನು ಕಲ್ಪಿಸಿ ಉದ್ಯಮ ಸೃಷ್ಟಿ ಮಾಡಲು ಉತ್ತೇಜನ ನೀಡಬೇಕು ಎಂದು ಹೇಳಿದರು.
ಪಿ.ಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 19 ಸಾವಿರ ಜನರಿಗೆ ತರಬೇತಿ ನೀಡಲಾಗಿದೆ. ಅದರಲ್ಲಿ 4,290 ಜನರಿಗೆ ಸುಮಾರು ₹ 30 ಕೋಟಿ ಸಾಲ ಸೌಲಭ್ಯವನ್ನು ನೀಡಲಾಗಿದೆ. ಪಿ.ಎಂ ವಿಶ್ವಕರ್ಮ ಯೋಜನೆ ಬಡ ಜನರಿಗೆ ಕೌಶಲದ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವುದು. ಅಧಿಕಾರಿಗಳು ಸದರಿ ಯೋಜನೆಯನ್ನು ಅರ್ಹರಿಗೆ ತಲುಪಿಸಿ ಎಂದು ಹೇಳಿದರು.
ಯುವನಿಧಿ ಪ್ಲಸ್:
ಯುವನಿಧಿ ಪ್ಲಸ್ ಯೋಜನೆಯಡಿ ಜಿಲ್ಲೆಯ 7 ತಾಲ್ಲೂಕುಗಳಿಂದ 315 ನಿರುದ್ಯೋಗಿಗಳು ಯುವನಿಧಿ ಪ್ಲಸ್ ಯೋಜನೆಯಡಿಯಲ್ಲಿ ತರಬೇತಿ ಪಡೆಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಯುವನಿಧಿ ಪ್ಲಸ್ ಯೋಜನೆಯ ಕುರಿತು ಕಾಲೇಜುಗಳಲ್ಲಿ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ನಿಧಿ ಪ್ಲಸ್ ನಲ್ಲಿ ಯುವಕರು ತರಬೇತಿ ಪಡೆಯುವಂತೆ ಮಾಡಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾಗಾನಂದ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಘಟಕಗಳ ಜಂಟಿ ನಿರ್ದೇಶಕ ದಿನೇಶ್, ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೆರೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್ ಪಾಲ್ಗೊಂಡಿದ್ದರು.
ಪಿ.ಎಂ ವಿಶ್ವಕರ್ಮ: 19 ಸಾವಿರ ಜನರಿಗೆ ತರಬೇತಿ ಫಲಾನುಭವಿಗಳಿಗೆ ಸೌಲ ಸೌಲಭ್ಯ ಕಲ್ಪಿಸಿ ಯುವನಿಧಿ ಪ್ಲಸ್: ತರಬೇತಿಗೆ 315 ನಿರುದ್ಯೋಗಿಗಳ ಆಸಕ್ತಿ
‘ಬೀದಿಬದಿ ವ್ಯಾಪಾರಿಗಳಿಗೆ ಸಹಾಯಧನ’
ಬೀದಿಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಪಿ.ಎಂ ಸ್ವ-ನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪಿ.ಎಂ ಸ್ವ-ನಿಧಿ ಸಹಾಯ ಧನವನ್ನು ಮೂರು ಹಂತಗಳಲ್ಲಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ₹15 ಸಾವಿರ ಎರಡನೇ ಹಂತದಲ್ಲಿ ₹25 ಸಾವಿರ ಮೂರನೇ ಹಂತದಲ್ಲಿ ₹50 ಸಾವಿರ ಹಣವನ್ನು ಶೇ 7ರಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸುವ ಫಲಾನುಭವಿಗಳಿಗೆ ರೂ 30 ಸಾವಿರದ ವರೆಗೂ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕುಮಾರ ಮಾಹಿತಿ ನೀಡಿದರು. ಅಧಿಕಾರಿಗಳು ಪಿ.ಎಂ ಸ್ವನಿಧಿ ಯೋಜನೆಯನ್ನು ಅರ್ಹರಿಗೆ ತಲುಪಿಸಿ ಯೋಜನೆಯ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗದ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.