ADVERTISEMENT

ಸರ್ಕಾರಿ ಶಾಲೆ ಉಳಿವಿಗೆ ಗ್ರಾಮಸ್ಥರ ಪಣ

ತಳಗವಾದಿ ಶಾಲೆ: ಅತಿಥಿ ಶಿಕ್ಷಕರ ನೇಮಕ, ಶಾಲೆಯ ರಕ್ಷಣೆಯಲ್ಲಿ ಯಶಕಂಡ ಗ್ರಾಮಸ್ಥರು

ಟಿ.ಕೆ.ಲಿಂಗರಾಜು
Published 18 ಫೆಬ್ರುವರಿ 2021, 7:14 IST
Last Updated 18 ಫೆಬ್ರುವರಿ 2021, 7:14 IST
ಟಿ.ಎಂ.ಪ್ರಕಾಶ್
ಟಿ.ಎಂ.ಪ್ರಕಾಶ್   

ಮಳವಳ್ಳಿ: ಏಳು ವರ್ಷಗಳ ಹಿಂದೆ ಮಕ್ಕಳ ದಾಖಲಾತಿ ಇಲ್ಲದೆ ಸೊರಗಿದ್ದ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜಿನ ಉಳಿವಿಗೆ ತಾಲ್ಲೂಕಿನ ಕಿರುಗಾವಲು ಹೋಬಳಿಯ ತಳಗ ವಾದಿ ಗ್ರಾಮಸ್ಥರು ತಂಡ ರಚಿಸಿ ಶ್ರಮಿಸಿರುವುದು ಈಗ ಫಲ ನೀಡಿದೆ. ಪರಿಣಾಮವಾಗಿ ದಾಖಲಾತಿ ಹೆಚ್ಚಳವಾಗಿದೆ.

1960ರಲ್ಲಿ ಗ್ರಾಮದ ಬೋರೇಗೌಡ ಅವರು ಒಂದು ಎಕರೆ ದಾನ ಮಾಡಿದ್ದ ಭೂಮಿಯಲ್ಲಿ ಆರಂಭವಾದ ಪ್ರಾಥಮಿಕ ಶಾಲೆಗೆ 60 ವರ್ಷವಾಗಿದೆ. 1969ರಲ್ಲಿ ಗ್ರಾಮದ ಹಿರಿಯರ ಶ್ರಮದಿಂದ ಪ್ರಾರಂಭವಾದ ಪ್ರೌಢಶಾಲಾ ವಿಭಾಗ 50 ವರ್ಷ ಪೂರೈಸಿದೆ. 12 ವರ್ಷಗಳ ಹಿಂದೆ ಕೆ.ಚೌಡಯ್ಯ ಸೇರಿ ಹಲವರು ಅಂದಿನ ಉನ್ನತ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಅವರ ಮೇಲೆ ಒತ್ತಡ ಹೇರಿ ಪದವಿ ಪೂರ್ವ ಕಾಲೇಜು ತಂದಿದ್ದರು.

2012ರಲ್ಲಿ ಪ್ರಾಥಮಿಕ ವಿಭಾಗದಲ್ಲಿ 200ಕ್ಕೂ ಹೆಚ್ಚು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 500ಕ್ಕೂ ಹೆಚ್ಚು ಮಕ್ಕಳಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಲಾರಂಭಿಸಿತು. ಹೀಗಾಗಿ ಕಳೆದ ಐದು ವರ್ಷಗಳ ಹಿಂದೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ನೂರರ ಗಡಿ ದಾಟಿರಲಿಲ್ಲ. ವಸ್ತುಸ್ಥಿತಿಯನ್ನು ಅರಿತ ಪ್ರಾಥಮಿಕ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್ ಗ್ರಾಮದ ಹಿರಿಯರನ್ನು ಒಂದೆಡೆ ಸೇರಿಸಿ, ಶಾಲೆ ಯಲ್ಲಿ ಓದಿ ಉನ್ನತ ಹುದ್ದೆಯಲ್ಲಿ ಇರುವವರು, ಪ್ರಾಶುಂಪಾಲರಾಗಿ ನಿವೃತ್ತರಾದ ಎಂ.ವಿ.ಕೃಷ್ಣ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಿದ್ದರು.

ADVERTISEMENT

ತಂಡದ ಶ್ರಮದಿಂದಾಗಿ 2017-18ನೇ ಸಾಲಿನ ಪ್ರಾಥಮಿಕ ಶಾಲೆಯಲ್ಲಿ 60 ಇದ್ದ ವಿದ್ಯಾರ್ಥಿಗಳ ದಾಖಲಾತಿ 2018-19 ಸಾಲಿನಲ್ಲಿ 130ಕ್ಕೆ ಹೆಚ್ಚಿಸಿದೆ. ಪ್ರೌಢಶಾಲಾ ವಿಭಾಗದಲ್ಲಿ 100ರ ಗಡಿಯಲ್ಲಿದ್ದ ದಾಖಲಾತಿಯನ್ನು 150ಕ್ಕೆ ಏರಿಸುವಲ್ಲಿ ಸಫಲತೆ ಕಂಡಿತು.

ಮುಚ್ಚುವ ಸ್ಥಿತಿಯಲ್ಲಿದ್ದ ಪಿಯು ಕಾಲೇಜನ್ನು ಮಳವಳ್ಳಿ ನಾಡಪ್ರಭು ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಆರ್.ಸೋಮೇ ಗೌಡ, ರಾಜ್ಯ ಘಟಕದ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಹನುಮಂತಯ್ಯ, ಟಿ.ಎನ್.ರಮೇಶ್ ಸೇರಿ ಹಲವರು ಪೋಷಕರ ಮನವೊಲಿಸಿ ಅಂತಿಮವಾಗಿ 22 ವಿದ್ಯಾರ್ಥಿಗಳನ್ನು ದಾಖಲು ಮಾಡಿ ಗಮನ ಸೆಳೆದಿದೆ.

ಕಾಲೇಜಿನ ವಿದ್ಯಾರ್ಥಿಗಳೀಗೆ ಹನುಮಂತಯ್ಯ ನೇತೃತ್ವದ ತಂಡ ದಾನಿಗಳ ನೆರವಿನಿಂದ ಶುಲ್ಕ ಪಾವತಿಸಿ ಉಚಿತ ಸಮವಸ್ತ್ರ, ಪುಸ್ತಕ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿದೆ. ಕಾಲೇಜಿಗೆ ಒಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ದಾನಿಗಳ ನೆರವಿನಿಂದ ಸಂಬಳ ನೀಡುತ್ತಿದ್ದಾರೆ.

ಸ್ಪರ್ಧಾತ್ಮಕ, ಗುಣಾತ್ಮಕ ಶಿಕ್ಷಣ ನೀಡಲು 3 ವರ್ಷಗಳಿಂದ ಪ್ರಾಥಮಿಕ ಶಾಲೆಗೆ ಮೂವರು ಅತಿಥಿ ಶಿಕ್ಷಕರನ್ನು ನೇಮಿಸಿ ಟಿ.ಎಂ.ಪ್ರಕಾಶ್ ಅವರು
ಸ್ವಂತ ಹಣದಿಂದ ಸಂಬಳ ನೀಡುತ್ತಿದ್ದಾರೆ. ಪ್ರಸ್ತುತ ವರ್ಷ ಎಲ್‌ಕೆಜಿ ಹಾಗೂ ಯುಕೆಜಿಗೆ 50 ಮಕ್ಕಳು ದಾಖಲಾಗಿವೆ ಎನ್ನುತ್ತಾರೆ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಎಂ.ಸುರೇಶ.

ನಾನೂ ಇದೇ ಶಾಲೆಯಲ್ಲಿ ಓದಿದವ. ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಕಂಡಿದ್ದ ಶಾಲೆಯು ಪೋಷಕರ ಖಾಸಗಿ ಶಾಲೆಯ ವ್ಯಾಮೋಹಕ್ಕೆ ಸಿಲುಕಿ ಮುಚ್ಚುವ ಸ್ಥಿತಿಯಲ್ಲಿತ್ತು. ಆಗ ನನ್ನ ಮೂವರು ಮಕ್ಕಳನ್ನೂ ಇಲ್ಲಿಗೆ ಸೇರಿಸಿ ಇತರರನ್ನು ಪ್ರೇರೇಪಿಸಿದ್ದೇನೆ. ಸರ್ಕಾರಿ ಶಾಲೆಯ ಉಳಿವಿಗೆ ಕೈಲಾದ ಸೇವೆ ಮಾಡುತ್ತಿರುವೆ ಎಂದು ಟಿ.ಎಂ.ಪ್ರಕಾಶ್ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.