ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಹಳ್ಳಿಗಳಲ್ಲಿ ಬೆಟ್ಟಿಂಗ್ ಭರಾಟೆ

ಸೋಲು- ಗೆಲುವಿನ ಲೆಕ್ಕಾಚಾರ

ಟಿ.ಕೆ.ಲಿಂಗರಾಜು
Published 24 ಡಿಸೆಂಬರ್ 2020, 3:26 IST
Last Updated 24 ಡಿಸೆಂಬರ್ 2020, 3:26 IST
ಮಳವಳ್ಳಿ ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆಯ ಕೊಠಡಿಗಳಲ್ಲಿ ಮತಪೆಟ್ಟಿಗಳಿಗೆ ಭದ್ರತೆ ಕಲ್ಪಿಸಿರುವುದು
ಮಳವಳ್ಳಿ ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆಯ ಕೊಠಡಿಗಳಲ್ಲಿ ಮತಪೆಟ್ಟಿಗಳಿಗೆ ಭದ್ರತೆ ಕಲ್ಪಿಸಿರುವುದು   

ಮಳವಳ್ಳಿ: ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ತಾಲ್ಲೂಕಿನ ವಿವಿಧ ಗ್ರಾಮಗಳ ಅಂಗಡಿ, ಹೋಟೆಲ್‌, ಶಾಲೆಗಳ ಆವರಣ, ಬಸ್ ತಂಗುದಾಣ, ದೇವಸ್ಥಾನಗಳ ಜಗುಲಿ ಮೇಲೆ ಕುಳಿತ ಹಳ್ಳಿಗರ ತಮ್ಮೂರಿನ ಯಾರೆಲ್ಲ ಪಂಚಾಯಿತಿ ಕಣದಲ್ಲಿ ಗೆದ್ದು ಬರಬಹುದು, ಯಾರಿಗೆ ಸೋಲು ಖಚಿತ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಪಕ್ಷದ ಬೆಂಬಲಿತರು ಅಧಿಕಾರಕ್ಕೆ ಬರಬಹುದು, ಎಷ್ಟು ಮತ ಪಡೆಯಬಹುದು ಎಂಬ ಬಗ್ಗೆಯೂ ಗಹನವಾದ ಚರ್ಚೆ ನಡೆಯುತ್ತಿದೆ.

ಒಟ್ಟು ಮತಗಳಲ್ಲಿ ನನಗೆ ಎಷ್ಟು ಬಿದ್ದಿರಬಹುದು. ಯಾರು ನನಗೇ ಮತನೀಡಿರಬಹುದು, ಕೊನೆ ಕ್ಷಣಕ್ಕೆ ಯಾರು ಕೈಕೊಟ್ಟಿರಬಹುದು? ಎಂಬ ಬಗ್ಗೆ ಅಭ್ಯರ್ಥಿಗಳೂ ಆಲೋಚಿಸುತ್ತಿದ್ದಾರೆ. ಖರ್ಚು ಮಾಡಿರುವ ಹಣದ ಬಗ್ಗೆಯೂ ಕೆಲವರು ಚಿಂತಿಸಿ ಗೆಲುವು ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ಬಹುತೇಕ ಪಂಚಾಯಿ ತಿಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಹಣ, ಹೆಂಡ, ಕುಕ್ಕರ್, ಮಿಕ್ಸಿ, ಸೀರೆ, ದೇವರ ವಿಗ್ರಹದ ಜತೆಗೆ ಅರಿಸಿನ- ಕುಂಕುಮ ಮೊದಲಾದ ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಎದುರಾಳಿ ಅಭ್ಯರ್ಥಿ ಒಂದು ಸಾವಿರ ಕೊಟ್ಟರೆ ಮತ್ತೊಬ್ಬ ಅಭ್ಯರ್ಥಿ ಎರಡು ಸಾವಿರ ರೂಪಾಯಿ ನೀಡಿರುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನಾಗೇಗೌಡನ
ದೊಡ್ಡಿ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ಒಂದು ಮತಕ್ಕೆ ಮೂರು ಸಾವಿರ ನೀಡಿದ್ದಾರೆ ಎನ್ನಲಾಗಿದ್ದು, ಅಷ್ಟು ಹಣ ನೀಡಿದ ಅವರ ಗೆಲುವಿನ ಬಗ್ಗೆಯೈ ಚರ್ಚೆ ನಡೆಯುತ್ತಿದೆ.

ಒಂದು ವಾರದಿಂದ ಕೃಷಿ ಚಟುವಟಿಕೆ, ಕೂಲಿ ಕೆಲಸ ಬಿಟ್ಟು ಅಭ್ಯರ್ಥಿಗಳು ನೀಡುತ್ತಿದ್ದ ಮದ್ಯ, ಕೋಳಿಯ ಆಮಿಷಕ್ಕೆ ಒಳಗಾಗಿದ್ದ ಕೆಲ ಮತದಾರರು ಈಗ ಹೊಲ ಗದ್ದೆಗಳತ್ತ ಮುಖ ಮಾಡುತ್ತಿದ್ದಾರೆ. ನಗರ ಪ್ರದೇಶಗಳಿಂದ ಮತದಾನ ಮಾಡಲು ಬಂದವರೂ ಮರಳುತ್ತಿದ್ದಾರೆ.

ಬೆಟ್ಟಿಂಗ್: ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬೆಟ್ಟಿಂಗ್ ದಂಧೆ ಆರಂಭವಾಗಿದೆ. ಇಂಥ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ ಎಂದು ಹಣ, ವಾಹನ ಪಣಕ್ಕಿಡಲು ಮುಂದಾಗಿದ್ದಾರೆ. ಇನ್ನೂ ಫಲಿತಾಂಶ ಹೊರಬರಲು ಆರು ದಿನ ಬಾಕಿ ಇದ್ದು, ಅಲ್ಲಿಯವರೆಗೆ ಬೆಟ್ಟಿಂಗ್ ಮುಂದುವರಿಯಲಿದೆ.

ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಕೊಠಡಿಗಳಲ್ಲಿ ಮತ ಪೆಟ್ಟಿಗೆ ಇರಿಸಲಾಗಿದ್ದು, ಭದ್ರತೆ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.