ADVERTISEMENT

ಹಲಗೂರು| ಸಾಗುವಳಿ ಪತ್ರ ನೀಡದೇ ವಂಚನೆ: ಭರತ್ ರಾಜ್ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:02 IST
Last Updated 26 ಜನವರಿ 2026, 7:02 IST
ಹಲಗೂರಿನಲ್ಲಿ ಭಾನುವಾರ ನಡೆದ ರೈತರ ಸಮಾವೇಶದಲ್ಲಿ ರೈತ ಮುಖಂಡ ಎನ್.ಎಲ್.ಭರತ್ ರಾಜ್ ಮಾತನಾಡಿದರು
ಹಲಗೂರಿನಲ್ಲಿ ಭಾನುವಾರ ನಡೆದ ರೈತರ ಸಮಾವೇಶದಲ್ಲಿ ರೈತ ಮುಖಂಡ ಎನ್.ಎಲ್.ಭರತ್ ರಾಜ್ ಮಾತನಾಡಿದರು   

ಹಲಗೂರು: ಮಳವಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು 40 ವರ್ಷಗಳಿಂದಲೂ ಬೇಸಾಯ ಮಾಡಿಕೊಂಡು ಬರುತ್ತಿದ್ದು, ಆಳುವ ಸರ್ಕಾರಗಳು ಸಾಗುವಳಿ ಪತ್ರ ನೀಡದೇ ರೈತರನ್ನು ವಂಚಿಸುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್. ಭರತ್ ರಾಜ್ ಆರೋಪಿಸಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಹಲಗೂರು ಹೋಬಳಿ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾರ್ಪೋರೇಟ್ ಸಂಸ್ಥೆಗಳ ₹11 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಜನ ವಿರೋಧಿ ಸರ್ಕಾರ, ರೈತರಿಗೆ ಮಾತ್ರ ಬೆಂಬಲ ಬೆಲೆ ಘೋಷಿಸಲು ಮೀನಮೇಷ ಎಣಿಸುತ್ತಿವೆ. ಕೇರಳ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದು, ರಾಜ್ಯ ಸರ್ಕಾರವೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಯೋಜನೆಗಳ ಹೆಸರು ಬದಲಿಸುವುದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಹೊಸ ಯೋಜನೆ ಜಾರಿಗೆ ತರುವ ಸಾಮರ್ಥ್ಯ ಇಲ್ಲದ ಕೇಂದ್ರ ಸರ್ಕಾರ ಇರುವ ಯೋಜನೆಗಳ ಹೆಸರನ್ನೇ ಬದಲಿಸುವುದನ್ನೇ ಅಭಿವೃದ್ಧಿ ಎಂದು ಹೇಳಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದರೂ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಈ ನಡುವೆಯೂ ಸರ್ಕಾರ ಪ್ರೀಪೇಯ್ಡ್ ವಿದ್ಯುತ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವುದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗರಾಜಮೂರ್ತಿ, ‘ರೈತರ ಹೆಸರಿನಲ್ಲಿ ನೂರಾರು ಸಂಘಟನೆಗಳು ಜನ್ಮತಾಳಿವೆ. ಆದರೆ ನಿಜವಾಗಿಯೂ ರೈತರ ಪರವಾಗಿ ಸಾಮಾಜಿಕ ಹೋರಾಟಗಳನ್ನು ಮಾಡುತ್ತಾ ಬಂದಿರುವುದು ಪ್ರಾಂತ ರೈತ ಸಂಘ ಮಾತ್ರ’ ಎಂದರು.

ನಿವೃತ್ತ ಶಿಕ್ಷಕ ಲಿಂಗಪಟ್ಟಣ ಸುಂದ್ರಪ್ಪ, ‘ದೇಶದ ಬೆನ್ನಲುಬಾಗಿರುವ ರೈತರು ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನ್ನ ನೀಡುವ ರೈತನ ಜೀವಕ್ಕೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದರು.

ಸಮಾವೇಶಕ್ಕೂ ಮುನ್ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೆಪಿಎಸ್ ಶಾಲೆಯವರೆಗೆ ಮೆರವಣಿಗೆ ನಡೆಯಿತು.

ಸಂಘದ ಹೋಬಳಿ ಘಟಕದ ಅಧ್ಯಕ್ಷ ಬಿ‌.ಎಸ್.ಮಹೇಶ್ ಕುಮಾರ್, ಕಾರ್ಯದರ್ಶಿ ಎ.ಎಲ್.ಶಿವಕುಮಾರ್, ಮುಖಂಡರಾದ ಮಹದೇವು ಪ್ರಮೀಳ, ಪದ್ಮ, ವಿಷಕಂಠಮೂರ್ತಿ, ಜ್ಯೋತಿ, ಮಹದೇವು, ನಾಗೇಶ್, ಶಾಂಭವಿ, ಸಣ್ಣಶೆಟ್ಟಿ ಇದ್ದರು.

ಹಲಗೂರಿನಲ್ಲಿ ಭಾನುವಾರ ನಡೆದ ರೈತರ ಸಮಾವೇಶದ ಅಂಗವಾಗಿ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.